Thursday, December 25, 2014

ಗುಲಾಬಿಯ ಬನ

"ಅಪ್ಪಳಿಸುವ ಅಲೆಯು ನೀನು 
ನನ್ನ ಪ್ರೀತಿಯ ಸಾಗರದ ದಡಕೆ 
ಜಿನುಜಿನುಗೋ ಇಬ್ಬನಿ ನೀನು 
ನನ್ನ  ಪ್ರೀತಿಯ ಗುಲಾಬಿ ಬನಕೆ"

"ತಂಗಾಳಿಯು  ಬೀಸಿ ಬಂದಿದೆ 
ಬಿಸಿ ಉಸಿರಿನ ಬೇಗೆಯ ನೂಕಲು 
ನಗುವಿನ ಸಿಹಿ ಹೊತ್ತು ತಂದಿದೆ 
ನೀನೆ ಹರುಸದ ಹೊನಲು ಆಗಲು"

"ನೀನಿರಲು ಆನುಕ್ಷಣ ಜೊತೆಯಲಿ 
ಪರಿದಿಯೇ ಇಲ್ಲವು ನನ್ನಯ ನಗುವಿಗೆ 
ನಗುತಲಿ ಬದುಕುವೆ ಭೂಮಿಯಲಿ 
ಸ್ಮರಿಸುವೆ ನಿನ್ನನು  ನಮ್ಮಯ ಪ್ರೀತಿಗೆ"


ಶ್ರೀನಿವಾಸ್ 

Sunday, November 9, 2014

ಕನಸು

"ಬೆಳದಿಂಗಳ ಚಂದ್ರನು ಮೂಡಿಬರಲಿ 
ಸುಂದರ ತಿಳಿ ನೀಲ ಆಗಸದಲ್ಲಿ 
ತುಂತುರಿನ ಮಳೆ ಜಿನುಗುತಿರಲಿ 
ನನ್ನಲಿ ನೀ ಮೂಡಿದ ಹೊತ್ತಿನಲ್ಲಿ "

"ಅನುಪಮ ಆ ಒಂದೊಂದು ಕ್ಷಣವೂ 
ನೀ  ಕಣ್ಮುಂದೆ ಸಾಗಿರಲು 
ಮರೆಯುವೆ ನನ್ನನ್ನೇ ನಾನು 
ಒಂದೊಂದು ಘಟನೆಯು ಘಟಿಸುತ್ತಿರಲು"

"ನೀ ಮೂಡದ ಒಂದೊಂದು ಇರುಳು 
ಕಡುಗತ್ತಲೆಯೇ ಕಣ್ಮುಂದೆ ಕವಿದಂತೆ 
ಮೂಡಿದ ಒಂದೊಂದು ಕ್ಷಣವೂ 
ಸಿಹಿ ಜೇನ ಸವಿದಂತೆ"

"ಮೂಡುತಲಿರು ಎಂದೆಂದಿಗೂ ನೀ 
ಎನ್ನ ಬಾಳಿನ ಒಂದೊಂದು ಇರುಳಿನಲಿ 
ನೀ ಮೂಡದ ದಿನ ಸಾಗದು ಈ ಜೀವನ 
ಮೂಡಿ ಬಾ ಅನುಕ್ಷಣವು ಸುಂದರ ಸ್ವಪ್ನವೇ ಈ  ಬಾಳಿನಲಿ"


ಶ್ರೀನಿವಾಸ್ 


Monday, October 13, 2014

ಚಿನ್ನ

ಯಾಕಿಂಗೆ ಕಾಡುವೆಯೇ  ಚಿನ್ನ 
ಚಕೋರನ  ಚಂದ್ರ ಕಾಡಿದಂತೆ ನನ್ನ{ಪ }
ಎದೆಯೊಳಗಿನ ಹಾರ್ಟ್ ನಲ್ಲೂ ನೀನೆ..  
ಕೈಯಾಗಿನ ನೋಟಲ್ಲು ನೀನೆ !೧!


ಕತ್ತಲಯ ಕಡೆದು ಬಂದ ಕೋಲ್ಮಿಂಚು ನೀನು .. 
ಎದೆಯ ಸಾಗರದಲಿ ಹೊಳೆವ ಸುಂದರ ಮೀನು 
ನೆನೆದು ಬರೆದಿರುವೆ ಈ ಕವಿತೆಯನ್ನ  
ಮುಂದಿಟ್ಟಿರುವೆ ನನ್ನ ಮನದ ಮಾತನ್ನ !೨!


ಬೀಸುವ ತಂಗಾಳಿಯಲ್ಲಿನ ಸ್ವರವು ನೀನು..  
ನನ್ನ ಎದೆಯೊಳಗಿನ ಸುಮಧುರ ಗಾನವು ನೀನು 
ಸವಿಯುತಿಹೆನು ಒಂದೊಂದು ಕ್ಷಣವನ್ನ 
ನಿನ್ನನೆ ನೆನೆ ನೆನೆದು ಪ್ರತಿ ದಿನವನ್ನ  !೩! 


ಕಪ್ಪೆಚಿಪ್ಪಿಯೊಳಗಿನ ಮುತ್ತು  ನೀನು..  
ಕಣ್ರೆಪ್ಪೆಯಲಿ ಭಂದಿಸುವೆ ನಿನ್ನನು ನಾನು  
ಹೀಗೇಕೆ ದೂರವೇ ಉಳಿದಿರುವೆ ನೀನು
ಸನಿಹವಾಗಲು ನಿನಗೆ ಸಂಕೋಚವೇನು !೪!




ಶ್ರೀನಿವಾಸ್ 

Tuesday, September 30, 2014

ನೆನಪು

"ಮರಿಯಲೆಂದರು ಮರೆಯಲಾಗದಂತೆ  
ಕಣ್ಣಲಿ ತುಂಬಿದೆ ನಿನ್ನದೇ ಚಿತ್ರ  
ನಿನದೆ ಗುಂಗಿನಲಿ ಚಡಪಡಿಸಿದಂತೆ  
ತಿಳಿಯದಾಗಿದೆ ಈ ನೋವೆ ವಿಚಿತ್ರ"

"ನಕ್ಕು ನಲಿದ ಒಂದೊಂದು  ಕ್ಷಣಗಳು 
ತೇಲಿಬರುತ್ತಿವೆ ಮನದಾಳದಲ್ಲಿ 
ನೆನೆ ನೆನೆದು ಮರುಗಿವೆ ಕಂಗಳು 
ನಿನ್ನ ಕಾಣುವ ತವಕದಲ್ಲಿ"

"ಕಾಣದ ಮರೀಚಿಕೆಯು ನೀನಾಗಿಹೆ 
ಪ್ರೀತಿ ಎಂಬ ಮರುಳುಗಾಡಿನಲ್ಲಿ 
ಬಳಲಿ ಬಳಲಿ ನಾ ಸೋತಿಹೆ 
ಅನುದಿನವು ನಿನ್ನ ಹುಡುಕುತಲಿ"

"ತಡವಾಗಿ ಅರಿವಾಯಿತು 
ನಿನ್ನೊಂದು ಸುಂದರ ಕನಸು 
ಎನ ಕಂಗಳಿಗೆ ಮರುಕವಾಯಿತು 
ಅವುಗಳಿಗೆ ನನ್ನೊಡನೆ ಉಸಿ ಮುನಿಸು"


ಶ್ರೀನಿವಾಸ್ 






Wednesday, September 17, 2014

ಸಾಧನೆ

"ಸರಿಗಮಗಳ ಶೃತಿಯಂತೆಯೇ ನಮ್ಮ ಈ ಬದುಕು 
ಕೂಡಿಸಿದ ಪದಗಳಿಗೆ ರಾಗವ ನಾವೇ ನೀಡಬೇಕು 
ಮಧ್ಯಮ ಮಾರ್ಗವು ಜೀವನದಲಿ ಅತಿ ಸುಂದರ 
ಲಯತಪ್ಪಿದರೆ ಬದುಕೆಲ್ಲವೂ ಬಲು ವಿಕಾರ" 

"ಬದುಕಿನಲಿ ಏರಿಳಿತಗಳು ಬರುವುದು ಸಹಜ 
ಅದನರಿತು ಬಾಳಬೇಕು ನೀ ಮನುಜ 
ಎದರದೆ ಮುನುಗ್ಗಿದರೆ ಬಾಳು ಅರ್ಥಪೂರ್ಣ 
ಮುಂದಿಟ್ಟ ಹೆಜ್ಜೆ ಇಂತೆರೆದರೆ ಅದುವೇ ಅಪೂರ್ಣ"

"ಸತ್ವ ಪರೀಕ್ಷೆಯು ಬಂದೊದಗಿದೆ ಇಂದು 
ಸಾಧನೆಯ ಶಿಖರವು ಕಾದು ಕುಳಿತಿದೆ ನಿನ್ನ ಮುಂದು 
ಧ್ರುತಿಗೆಡದೆ, ಮತಿಗೆಡದೆ ಸಾಗು ನೀ ಸಾಹಸಿ 
ಅಲ್ಲಗಳೆದವರ ಭಾವನೆಗಳ ಮಾಡುವೆ ನೀ ಹುಸಿ"

"ಸಾಧನೆಗೆ ಕೊನೆ ಇಲ್ಲ  ಈ ಜಗದಲಿ 
ಸಾಧಿಸಿದೊಡನೆಯೇ ನೀನಾಗುವೆ ಕಲಿ 
ಆಗುವುದು ನಿನ ಬದುಕು ಸುಂದರ, ಸುಮಧುರವು  
ಆದಾವು ನಿನ್ನ ಸಾಧನೆಗಳೇ ಅಮರ, ಅಜರಾಮರವು"  


ಶ್ರೀನಿವಾಸ್ 

Thursday, September 11, 2014

ಪ್ರಕೃತಿ

"ಚೆಲುವಿನ ಚಿಲಿ ಪಿಲಿ ಹಕ್ಕಿಯ ಗೂಡಲಿ 
ಏನೋ ಗಲಿ ಬಿಲಿ ನನ್ನೆಯ ಮನದಲಿ 
ತಿಳಿಸಿ ಹೇಳುವಿರ  ಕಾರಣವ 
ನನ್ನೆಯ ಪ್ರೀತಿಯ ಹಕ್ಕಿಗಳೇ 
ನಗುತಾ ನಲಿವ ಹುವುಗಳೇ"

"ಅತಿಮಧುರವು ನೀ ಪ್ರಕೃತಿಯು 
 ಅರಿಯದ ನನ್ನ ಮನವು ವಿಕೃತಿಯು 
ತಣಿಸು ನನ್ನನು ನಿನ್ನಯ ಸೊಬಗಿಂದ 
ನಲಿಯಲಿ ನನ್ನೀ ಮನವು ಖುಷಿಯಿಂದ 
ನನ್ನೆಯ ನಮನವು ಪ್ರಕೃತಿಯೇ"

"ದುಮುಕಿ ಹರಿಯುವ ಜಲಧಾರೆಯು 
 ಕಂಪಿಸೋ ತಣ್ಣನೆಯ ತಂಗಾಳಿಯು 
ನಿನ್ನಯ ವರಗಳು ಈ ಧರೆಗೆ 
ಸರಿಸಾಟಿಯು ಯಾರಿಹರು ನಿನಗೆ 
ಶರಣೆಂಬೆವು  ನಿನಗೆ ಪ್ರಕೃತಿಯೇ"

"ತಿಳಿಸಿ ಹೇಳೆಯ ಚೆಲುವಿನ ಗುಟ್ಟನು 
ಅರಿಯಲು ಆಗದು ಎಂದಿಗೂ ನಿನ್ನನು 
ನಿನ್ನಯ ಪರಿದಿಯಲಿ ಈ ಜಗವು 
ಮಿತಿ ಮೀರಿದರೆ ಜಗಕೆ ಬರಿ ನೋವು 
ಇರಲಿ ಕ್ಷಮಿಸಿ ನಮ್ಮನು ನೀ ಸಲಹು" 


ಶ್ರೀನಿವಾಸ್ 

Monday, September 1, 2014

ಸ್ವಪ್ನ

''ಬರದ ಬಿರುಬೇಸಿಗೆಯಲ್ಲೂ ಮುಂಗಾರಿನ ಅಭಿಷೇಕವ 
ಉರಿವ ಬಿಸಿಲಿನಲ್ಲೂ ಹೊಳೆವ ಇಬ್ಬನಿಯ 
ಮಾಗಿಯ ಚಳಿಯಲಿ  ಎದೆತುಂಬಿ ಹಾಡುವ ಕೋಕಿಲವ 
ಎಲ್ಲವೂ  ಇರುವ  ಕಂಡೆನು ಒಂದು ಸ್ವಪ್ನವ'' 

"ಆ ಸ್ವಪ್ನವೇ ನೀನಾಗಿಹೆ ಎಂದರಿಯಲೇ ಇಲ್ಲ 
ಸ್ವಪ್ನದಲೆ ಮುಳುಗಿಹೆನೆಂದು ನಾ ಬಗೆದಿರಲಿಲ್ಲ  
ಕ್ಷಣಗಳು ದಿನಗಳು ಉರುಳಿದವು ಎನಗೆ ತಿಲಿಯದಲೆ 
ಕಳೆದು ಹೋದೆನು ನಿನ್ನಯ ಗುಂಗಿನಲೆ"

"ನಿಜ ನುಡಿವೆನು ಸ್ವಪ್ನ ನೀನಿರದ ಜಗವುಂಟೆ
ಸಕಲ ಜೀವಕು ಸತ್ವವು ನೀ ಸುಂದರ ಸ್ವಪ್ನವು 
ಎನ್ನ ತನುವು ಎನ್ನೀ ಮನವು ಚಡಪಡಿಸಿದೆ 
ಅನುಕ್ಷಣವು ನಿನ್ನನೆ ಜಪಿಸಿದೆ ಪರಿತಪಿಸಿದೆ"

"ಎಂದು ನೀ ಅರಿವೆಯೋ ನನ್ನ ಮನದ ಮಿಡಿತವ 
ಕಾದು ಕುಳಿತಿಹೆ ಕಾಣಲೆಂದೇ ಸುಂದರ ಸ್ವಪ್ನವ 
ಬರುವೆಯ ಎನ್ನ ಬಾಳಿನಲಿ ಮಿನುಗುವ ನಕ್ಷತ್ರವಾಗಿ 
ನಿನ್ನಯ ಜಪದಲಿ ಪರಿತಪದಲಿ ಕಾದಿಹ ನಾ ವಿರಾಗಿ"



ಶ್ರೀನಿವಾಸ್ 

Tuesday, August 26, 2014

ಮಾಯಾಮೃಗ

"ಭಾವನೆಗಳಿಗೆ ಬಣ್ಣವನಚ್ಚಿ 
ಮಾತಿನ ಮಯಾಜಾಲವನೆಣೆದು 
ನನ್ನ ಭಾವನೆಗಳ ಬಾಂದಳದಲಿ 
ಚದುರಂಗವಾಡಿದ ಮನವೇ ನಿನಗಿದೋ ಧಿಕ್ಕಾರ"

"ನುಡಿದ ನುಡಿಗಲೆಲ್ಲವು ನುಡಿಮುತ್ತುಗಳಂತೆ 
ಅದರೊಳಗಿನ ಮರ್ಮವು ಜೇನ್ತಲದ ಕಸದಂತೆ 
ಆಡಿದ ಮಾತಿಗೆ ಅರ್ಥವನ್ನಿಯದ 
ಓ ಕ್ರೂರ ಮನವೇ ನಿನಗಿದೋ ಧಿಕ್ಕಾರ"

"ಸೌಮ್ಯತೆಯಲಿ ಕಟೋರತೆಯನು 
ಜಂಗಮತೆಯಲಿ ಕ್ರೂರತೆಯನು  
ಉದುಗಿಸಿಟ್ಟ ಓ ಮಾಯಾ ಮೃಗವೇ 
ನಿನಗಿದೋ ಅನಂತ ಅನಂತ ಧಿಕ್ಕಾರಗಳು"


ಶ್ರೀನಿವಾಸ್ 

Monday, August 18, 2014

ಸುಳ್ಳಿನ ಸರಮಾಲೆ

''ಸುಳ್ಳಿನ ಸರಮಾಲೆ ನೋಡಲು ಬಲು ಸೊಗಸು 
ಪ್ರತಿ ಸುಳ್ಳಿಗೆ ಮತ್ತೊಂದು ಸುಳ್ಳು  ಎಣೆದೆಣೆದು 
ಕಟು ಸತ್ಯವೇ ನಾಚುವಂತೆ  ತಯಾರಿಸಿದ 
ಸುಳ್ಳಿನ ಸರಮಾಲೆಯು ಬಲು ಸೊಗಸು''

''ಸೂಜಿ ದಾರವೇ ಬೇಡ ಬಲು ಸುಲಲಿತ ಪೋಣಿಸಲು 
ಅಂತ್ಯವೇ ಇಲ್ಲ ಒಂದಕ್ಕೊಂದು ಜೊತೆಗೂಡಲು 
ಸರಿ ಸಾಟಿಯೇ ಇಲ್ಲ ಜಗದಲಿ ಇದಕೆ 
ಮೊದಲೆಂಬುದು ಕೊನೆ ಎಂಬುದಿಲ್ಲ  ಈ ಸರಮಾಲೆಗೆ '' 

'' ಬಣ್ಣದ ಮಾತಿನ ಮಹನೀಯರು 
ಬಲು ಇಷ್ಟದಿ ಧರಿಸುವರು ದಿನ ದಿನವು 
ಸುಳ್ಳಲ್ಲಿ ಹುಟ್ಟಿ ಸುಳ್ಳಲ್ಲಿ ಕೊನೆಗಾಣುವ ಪ್ರತಿ ಕ್ಷಣವು 
ಅವರ ಪಾಲಿಗೆ ಬಲು ಹಿತವು, ಬಲು ಸೊಗಸು ''


ಶ್ರೀನಿವಾಸ್ 

Thursday, August 7, 2014

ವರಮಹಾಲಕ್ಷ್ಮೀ

''ವರಗಳ ಕರುಣಿಸೋ ವರದೇ ಎಂದು
ಇಲ್ಲದ ವರಹವ ಕೂಡಿಸಿ ತಂದು 
ನಿನ್ನ ಪಾದದಡಿಯಲಿ ಮಿಂದು 
ಕರುಣಾಳು ನೀ ಧಯೇ ತೋರೆಂದು ಭಜಿಸಿಹರು''

''ನಿನ್ನಯ ಪಕ್ಷಪಾತವ ಕಾಣದ ಗಾವಿಲಿಗರು 
ಈ ಜಗದಲಿ ನೆಲೆಸಿಹ ಬಡಜನರು 
ಸಾಲ ಸೋಲವ ಮಾಡಿ ತುಪ್ಪದ ದೀಪವ ಅಚ್ಚಿಹರು 
ವರುಷ ವರುಷಗಳೇ ಸಾಲದ ಮಡುವಿನಲೇ ಬದುಕಿಹರು''

''ಎಂದಿಗೂ ನೀನು ಉಳ್ಳವರ ಪರವಾದಿ 
ಇಲ್ಲದವನ ಎದೆಗೆ ಹೊದ್ದು ಉಳ್ಳವನ  ವರಿಸುವೆ 
ಬಡ ಮೂರ್ಖರ ಬಡತನದ ಬಚ್ಚಲಿಗೆ ತುಳಿದು 
ಉಳ್ಳವನ ಪಲ್ಲಂಗಕ್ಕೆ ಕೊಂಡೊಯ್ಯುವೆ''

ಇದೋ ನಿನಗೆ ನನ್ನೆಯ ಧಿಕ್ಕಾರ ....... 


ಶ್ರೀನಿವಾಸ್ 

Wednesday, August 6, 2014

ಜೀವನ

"ನಗುವ ಗುಲಾಬಿಗೆ ತಿಳಿದಿರುವುದಿಲ್ಲ 
ತನ್ನ ನಗುವಿನ ಸೋಬಗೆನೆಂದು 
ನುಡಿವ ವೀಣೆಗೆ ಅರಿವಿವಿರುವುದಿಲ್ಲ 
ತನ್ನ ನಾದದ ಮಹತ್ವವೆನೆಂದು''

''ಕೂಗುವ ಕೋಗಿಲೆಗೆ ಗೊತ್ತಿಲ್ಲ 
ತನ್ನ ಕೂಗಿನ ಗಾನಸಿರಿಯಲ್ಲಿನ ಪುಳಕವು 
ಜೀವನವೆಂಬ ರಂಗದಲ್ಲಿ ನಟಿಸುವ ನರನಿಗೆ ತಿಳಿದ್ದಿಲ್ಲ 
ತನ್ನ ಜೀವನದ ಅಂತ್ಯವೆನೆಂದು''

''ಇವೆಲ್ಲದರ ಅಪೂರ್ವ ಸಂಗಮವೇ 
ನಮ್ಮೆಲ್ಲರ ಈ ಸಂಜೀವನ 
ಬರಬಹುದು ನೂರೆಂಟು ವೈಮನಸ್ಸುಗಳು 
ದಾಟಿದಾಗಲೇ ಜೀವನವು ಆನಂದದ ಬನ''


ಶ್ರೀನಿವಾಸ್ 

Tuesday, July 29, 2014

ಸ್ಪೂರ್ತಿ

''ನಿನ್ನ ಹಗಲಿಕೆಯು ಎನ್ನ ಪರಿತಪಿಸುವಂತೆ ಕಾಡಿದೆ 
ನೀ ಇರದ ಈ ಜೀವವು ಕ್ಷಣ ಕ್ಷಣವೂ ನರಳಿದೆ 
ಎಂದಿಗೆ ಬರುವೆಯೋ ಎಂದು ದಾರಿಯನ್ನೇ ಎದುರುನೋಡಿದೆ 
ಓ ಸ್ಪೂರ್ತಿಯೇ ನೀನಿಲ್ಲದೆ ಈ ಕವಿತೆಗೆ ಅರ್ಥವೆಲ್ಲಿದೆ''

''ನಾನ್ನೆದೆಯಲಿ ಹೊಮ್ಮಿದ ಪ್ರೀತಿ, ಸ್ನೇಹದ ಕಾರಂಜಿಯು 
ನಿನ್ನೆಸರನೆ ಕೂಗಿ ಕೂಗಿ ಹೇಳಿವೆ ನೀ ಸ್ಪೂರ್ತಿ ಎಂದು  
ಅನುಕ್ಷಣ ನಿನದೇ ಜಪ, ತಪವು  ಈ ಹೃದಯದಲಿ 
ಹೊರಬೀಳಲಿ ಅಂತರಾತ್ಮದ ಭಾವನೆಗಳು ಮುಕ್ತ ಮನಸ್ಸಿನಲಿ''


ಶ್ರೀನಿವಾಸ್ 


Thursday, July 24, 2014

ನಲ್ಲೆ

''ನಲ್ಲೆ ನೀನಿಲ್ಲದ ಕ್ಷಣ 
ಸಾಗದು ಪ್ರತಿ ದಿನ 
ತೋಳಲಾಡುವ ನನ್ನ ಈ ಜೀವ 
ಸಹಿಸಲಾರದು ನೋವ''

''ದಿನಗಳೇ ಉರುಳಿವೆ ಬೇಸರದಿಂದ 
 ಸುಳಿವೇ ದೊರಕದಾಗಿದೆ ನಿನ್ನಿಂದ 
ದಾರಿತಪ್ಪಿ ಅಲೆದಿರುವೆ ಈ ಕ್ಷಣ 
ಕಾದು ಕುಳಿತಿರುವೆ ನಿನಗಾಗಿ ಅನುಕ್ಷಣ''


ಶ್ರೀನಿವಾಸ್ 




Thursday, July 17, 2014

ಅತ್ಯಾಚಾರ

"ನಡೆದಿದೆ ಧರೆಯಲಿ ಅತ್ಯಾಚಾರದ ಮಾರಣಹೋಮ 
ನೆಡೆಸುತಿಹರು ರಾಜಕಾರಣಿಗಳು ಸದನದಲಿ ಕೋಲಾಹಲವೆಂಬ ಡ್ರಾಮ 
ಸಾಕುಮಾಡು ನೀ ಹೆಣ್ಣೆ ಶಾಂತಿ, ಸಹನೆಗಳ ಕೋಮ 
ಜರುಗಲಿ ಕಚ್ಚೆಹರುಕರ, ಕಾಮಂದರ ನಿರ್ನಾಮ''

ಶ್ರೀನಿವಾಸ್ 

Wednesday, July 9, 2014

ಸ್ತ್ರೀ

''ಕಣ್ಣಿರು ಹಿಡುತಲ್ಲೇ ಜಗತ್ತಿಗೆ ಬಂದು 
ಕತ್ತಲೆಂದು ಜರಿದ ಮನೆ ಮನಗಳಿಗೆ 
ಪ್ರೀತಿ, ವಾಸ್ತಲ್ಯದ ಅಮೃತವ ಉಣಬಡಿಸಿ 
ಜಗತ್ತಿನ ಕಾಡುಗತ್ತಲಿಗೆ ದಿವ್ಯ ಜ್ಯೋತಿಯು  ನೀನು''

''ಕೈ ಹಿಡಿದ ಗಂಡನಿಗೆ ಬೆನ್ನಾಗಿ 
ಕರುಳ ಕುಡಿಗಳಿಗೆ ಉಸಿರಾಗಿ 
ಜೀವ, ಜೀವಗಳ ಸಲುವಿದ ಕೈಗಳಿಗೆ
ಜಗತ್ತಿನ ಕರತಾಡನವು ಸಲ್ಲಲಿ''

''ದಿವ್ಯ ಪ್ರಭೆಯು ನಿನ್ನ ಪ್ರೀತಿಯು 
ಸಾವಿರ ಸಾವಿರ ಜೀವಗಳಿಗೆ ಸ್ಫೂರ್ತಿಯು 
ನಿನ್ನ ಕಣ್ಣಿನ ನೀರು ಬತ್ತಿಹೋಗಲಿ 
ಕ್ಷೀರಸಾಗರದಂತ ಉಲ್ಲಾಸವು ನಿನ್ನದಾಗಲಿ''


ಶ್ರೀನಿವಾಸ್ 

Tuesday, July 8, 2014

ಗುಬ್ಬಿ

"ನನ್ನ ಗುಬ್ಬಿಯ ಮನಸ್ಸು ಗುಮ್ಮನ ಹಾಗೆ 
ತಿಳಿದುಕೊಳ್ಳಲು ಆಗುವುದೇ ಇಲ್ಲ 
 ಕೆದಕಿ ನೋಡಿದರೆ ಬರಿ ಬಣ್ಣವೇ ತುಂಬಿದೆ 
ಸಹಿಸಿಕೊಳ್ಳಲು ಆಗುತಲೇ ಇಲ್ಲ''

''ಪ್ರೀತಿಸಿದೆ, ಗೌರವಿಸಿದೆ ತುಂಬು ಮನಸ್ಸಿನಿಂದ 
ಹಾರಿಹೊಗುವುದೆಂದು ನಾ ಬಯಸಿರಲಿಲ್ಲ 
ಕಾಲ ಮೀರಿದೆ ನಾ ಕಳೆದು ಹೋಗಿಹೆನು 
ದಾರಿಯು ಎನಗೆ ತಿಳಿಯುತ್ತಿಲ್ಲ''

''ತುಂಬಿಕೊಂಡಿವೆ ಎನ್ನ ಕಣ್ಣುಗಳು 
ನನ್ನ ಗುಬ್ಬಿಯದೆ ಮುದ್ದಾದ ಪ್ರತಿಬಿಂಬ 
ಸಾಕು ಸಾಕಾಗಿದೆ ಹುಡುಕುತ ನಿನ್ನ 
ನೋವೆ ತುಂಬಿದೆ ನನ್ನೆದೆಯ ತುಂಬಾ''


ಶ್ರೀನಿವಾಸ್ 

Thursday, July 3, 2014

ಬೀಗಮುದ್ರೆ

"ನನ್ನ ಹೃದಯ, ಮನಸ್ಸು, ಭಾವನೆಗಳ ಖಜಾನೆಗೆ ಒಂದೇ ಬೀಗಮುದ್ರೆ 
ತುಸು ಶ್ರಮಪಟ್ಟು ತೆರೆದರೆ ತನ್ನಷ್ಟಕ್ಕೆ ಬಿಚ್ಚಿಕೊಳ್ಳುವ ನಿಜದ ಗಂಟುಗಳು 
ನಿಮ್ಮ ಹೃದಯ, ಮನಸ್ಸು, ಭಾವನೆಗಳಿಗೆ ನೂರೆಂಟು ಬೀಗಮುದ್ರೆ 
ಶ್ರಮದ ಸರಮಾಲೆಯೇ ತಂದಿಟ್ಟರು ಕಾಣುವವು ಅರ್ಥವಾಗದ ಒಗಟುಗಳು''


ಶ್ರೀನಿವಾಸ್ 


Wednesday, July 2, 2014

ಕರುಣಾಳು

"ಭೂಮಿ ತೂಕದ ಸಹನೆಯೂ ಅಡಗಿದೆ ನಿನ್ನಲ್ಲಿ 
ಜಗವೇ ಮಲಗಿದೆ ನಿನ್ನ ಪ್ರೀತಿಯ ಮಡಿಲಲ್ಲಿ 
ಇಳೆಯನ್ನೇ ಎತ್ತಿ ಹಿಡಿದಿರುವೆ ನಿನ್ನ  ಪ್ರೇಮದಿಂದ 
ಅನುಗಾಲವೂ ಸಾಗಿದೆ ದಿನ ಶಾಂತಿಯಿಂದ''

''ಕರುಣಾಮಯಿ  ನೀ  ಸಲಹುತಿರುವೆ ಈ ಜಗವನು 
ಪ್ರೀತಿಯಿಂದಲೇ ಪೊರೆವೆ ಪ್ರತಿ ಅಣು ಅಣುವನು 
ಬೆಲೆ ಕಟ್ಟಲಾಗದ ಮಾಣಿಕ್ಯವು ನೀನು ಈ ಜಗಕೆ 
ನಿನ್ನ ಶಾಂತಿ, ಸಹನೆ ಪ್ರಭೆಯ ಬೀರು ಪ್ರತಿಯೊಂದು ಮನಕೆ''


ಶ್ರೀನಿವಾಸ್ 


Sunday, June 29, 2014

ಹೆಣ್ಣಿನ ದವಾಂತ

"ನೀ ನನ್ನ ಜನ್ಮನೀಡಿದ ತಂದೆಯೆಂದು ಅರಿತೆ 
ನೀ ಎನ್ನ ಒಡಹುಟ್ಟೆಂದು ಬೆರೆತೆ 
ನೀ ಎನಗೆ ಸಂಬಂಧಿ ಎಂದು ನಿನ್ನೊಡನೆ ಕಲೆತೆ 
ಮಾಂಸ, ರಕ್ತವನ್ನು ಹೀರುವ ನರಭಕ್ಷಕ ನೀನೆಂದು ನಾ ಅರಿಯಲಿಲ್ಲ ''

ಎಲೆ ಗಂಡೆಂಬ ಕ್ರುರಪಿಪಾಸುವೆ 





Thursday, June 26, 2014

ಸುಮಧುರ ಸ್ನೇಹ

"ನನ್ನೆದೆಯ  ಸ್ನೇಹದ ಹಾಸುಗಲ್ಲಮೇಲೆ 
ನೂರುಜನ ವಿಶ್ರಮಿಸಿ ನಿರ್ಗಮಿಸಿದರೂ 
ಅವೆರನೆಂದು ಮತ್ತೆ ಬರಲೆಂದು ನಾ ಬಯಸಲಿಲ್ಲ 
ಸದಾ ಕಾಲ ನಿಮ್ಮ ಸುಮಧುರ ಸ್ನೇಹ ನನ್ನೊಡನೆ ಇರಲು" 


  ಶ್ರೀನಿವಾಸ್ 

Monday, June 23, 2014

ಅರಳಿಕಟ್ಟೆ

"ಅಂದು ಹುಡುಗಿಯರೇ ಸುತ್ತುತ್ತಿದರು ಅರಳಿಕಟ್ಟೆ 
ಇಂದು ಹುಡುಗರು ಸುತ್ತುತ್ತಿದ್ದಾರೆ ಸಿಕ್ಕಾಪಟ್ಟೆ 
ಹುಡುಗಿಯರು ಸುತ್ತುತ್ತಿದ್ದುದು ಕುಡುಕನಲ್ಲದ ಹುಡುಗ ಸಿಗಲೆಂದು 
ಹುಡುಗರು ಸುತ್ತುತ್ತಿರುವುದು ಕುಡುಕಿಯು ಸಿಗದಿರಲೆಂದು"


ಶ್ರೀನಿವಾಸ್ 

Monday, June 16, 2014

ಹೊಣೆಗಾರಿಕೆ

"ಸ್ನೇಹವೆಂಬ ಕುರುಡು ಕುದುರೆಯನ್ನೇರಿ 
ಮನಸ್ಸೆಂಬ ಮರಳುಗಾಡಿನಲ್ಲಿ ಪ್ರಯಾಣಿಸಿ 
ದಾರಿತಪ್ಪಿರುವೆನೆಂದು ಮರುಗಿದರೆ 
ಇದಕ್ಯಾರು ಹೊಣೆ?"

"ಭಾವನೆಗಳೆಂಬ  ಉತ್ತುಂಗ ಶಿಖರವ ನಿರ್ಮಿಸಿ 
ಇದು ಗಾಳಿಗೋಪುರವೆಂದು ಜರಿದು 
ಬಿರುಗಾಳಿಗೆ ಭಾವನೆಗಳೇ ಬಲಿಯಾಗಲು 
ಇದಕ್ಯಾರು ಹೊಣೆ?"

"ಬಲವಂತದಿಂದ ಪಡೆವುದು ಪ್ರೀತಿಯಲ್ಲ 
ಸ್ನೇಹವೆಂಬುದು ಕಡೆದುಕೊಳ್ಳುವ ಬಂಧವಲ್ಲ 
ಒಬ್ಬರನ್ನೊಬ್ಬರು ಅರಿತುಕೊಳ್ಳದೆ ಜರುಗುವ ಅಪಘಾತಗಳು 
ಇದಕ್ಯಾರು ಹೊಣೆ?"


ಶ್ರೀನಿವಾಸ್ 


Wednesday, June 11, 2014

ನೀವು

"ಕಣ್ಣೆಂಬ ಕ್ಯಾಮೆರಾದಲ್ಲಿ 
ತೆಗೆದ ನಿಮದೆ ನೂರೆಂಟು ಚಿತ್ರಗಳು 
ಜಾಗ ಸಾಲದೆ ಕಣ್ಣ ಚುಚ್ಚುತ್ತಿವೆ ಒಂದೇಸಮನೆ 
ಕಣ್ ತೆರೆದರೆ ಬಾಸ್ಪವಾಗಿ ಹೊರಹೊಮ್ಮಲು ಕ್ಷಣಗಣನೆ "

"ಕ್ಷಣಕೊಮ್ಮೆ, ದಿನಕೊಮ್ಮೆ ಕಂಡಾಗಲೆಲ್ಲ ನಿಮ್ಮನು
ಒಮ್ಮಿದವು ನೂರೆಂಟು ಹೊಸ ಭಾವಗಳು 
ತೋಡಿಕೊಳ್ಳಲು ಆಗಲೇ ಇಲ್ಲ 
ಎದುರಾದವು ವಿರಸದ ಕಾರ್ಮೋಡಗಳು"

"ಕಾದಿರುವುದು ಈ ಹೃದಯ
ನಿಮ್ಮ ಒಂದೇ ಒಂದು ಕಣ್ ಸನ್ನೆಗೆ 
ಹರ್ಷದ ಹೊಳೆಯಲಿ ಮಿಂದು ಕುಣಿವುದು 
ನಿಮ್ಮ ಒಂದೊಂದು ಸುಮಧುರ ನುಡಿಗೆ "



ಶ್ರೀನಿವಾಸ್

Sunday, June 8, 2014

ಪ್ರೀತಿಬಯಸಿ

ಎಲ್ಲೋ ನಾನಿದ್ದೆ 
ಎಲ್ಲಿಂದಲೋ ನೀ ಬಂದೆ 
ಸಂಧಿಸಿದ ಆ ದಿನ 
ಸುಂದರ ಸಮಾಗಮದ ಸುದಿನ  

ನೀವು ನುಡಿದ ಒಂದೊಂದು ಮಾತು 
ನನ್ನೆದೆಯ ಕಪ್ಪೆಚಿಪ್ಪಿನಲ್ಲಿ ಉದುಗಿಟ್ಟ ಸ್ವಾತಿಮುತ್ತು 
ಕಳೆದಿವೆ ಕ್ಷಣಗಳು ದಿನಗಳು ತಮ್ಮಷ್ಟಕ್ಕೆ ತಾವೇ 
ತುಂಬಿ ತುಳುಕಿದೆ ನನ್ನೆದೆಯ ತುಂಬಾ ಬರಿ ನೋವೆ 

ಅರಿವಿಗೆ ಬಾರದೆ ಒಮ್ಮಿದ  ಭಾವವ ತೋಡಿಕೊಂಡಿತು ಮನ 
ಕರಗಲಿಲ್ಲ, ಸ್ಪಂದಿಸಲ್ಲಿಲ್ಲ ನಿಮ್ಮ ಮನ ಆ ದಿನ 
ಏನು ಸಾಧಿಸಬಲ್ಲೆವು ಒಂದು ಹೃದಯವನು ಅರಿಯದೆ 
ನಿಮ್ಮ ಆ ಭಾವವ ಕಂಡು ಸುಮ್ಮನಾಗಿರುವೆ  ಏನನ್ನು ನುಡಿಯಲಾಗದೆ 

ಇಂದು ನೀವು ನನ್ನ ಮರೆತಿರಬಹುದು 
ಮುಂದೊಂದು ದಿನ ನೆನೆಯುವ ಕಾಲ ಬರಲುಬಹುದು 
ಆ ದಿನ, ಆ ಕ್ಷಣಕ್ಕಾಗಿ ಎದರು ನೋಡುತ್ತಿರುವೆ 
ನಿಮ್ಮ ಪ್ರೀತಿಯ ಬಯಸಿ ಕಾದು ಕುಳಿತಿರುವೆ 



ಶ್ರೀನಿವಾಸ್ 



Saturday, May 10, 2014

ಅಮ್ಮ

"ಸರಿಸಾಟಿಯೇ ಇಲ್ಲ ಜಗದಲಿ ನಿನ್ನ ತಾಳ್ಮೆಗೆ 
ಪೃಥ್ವಿಯೆ  ಶರಣಾಗಿದೆ ನಿನ್ನಯ ಪ್ರೀತಿಗೆ 
ತಾ ನೊಂದು ತಾ ಬೆಂದು 
ತನ್ನ ಕರುಳ ಕುಡಿಗೆ ಜೀವ ನೀಡಿ ಸಲಹುವೆ"

"ಕಡುಕಷ್ಟಗಳಿಗೆ ಧೃತಿಗೆಡಲಿಲ್ಲ
ಮುಂದಿಟ್ಟ ಹೆಜ್ಜೆಗಳ ಹಿಂದೆರೆಯಲಿಲ್ಲ 
ಮುನ್ನುಗ್ಗಿಯೆ ಧೀರ ವನಿತೆಯಾಗಿ
ನಿನಗೆ ಸರಿಸಾಟಿ ಯಾರಿಹರು ಧರೆಯಲಿ "

"ಜರಿದವರಿಗೆ ನಿನ್ನ ಮೌನವೆ ಉತ್ತರ 
ಕ್ಷಣ ಕ್ಷಣವು ಸುರಿಸಿದೆ ನೆತ್ತರ 
ನಿನ್ನ ಕರುಳ ಬೇನೆಗೆ ಬೆಲೆಯುಂಟೆ ಜಗದಲಿ
ಕರುಣಾಳು ನೀನಾದೆ ಎನ್ನ ಮನದಲಿ "

"ಯಾರೇನೆ ಜರಿದರು ಸಹಿಸಿದೆ
ಪಡಿಪಾಟಲುಗಳ ಗಂಟನ್ನ ಉದರದಲ್ಲಿರಿಸಿದೆ
ನೋವಿನ ಬಹುಪಾಲು ನೀನೆ ನುಂಗಿದೆ
ಪ್ರತಿ ಕರುಳ ಕುಡಿಯ ಸಾಕಿ ಸಲುಹಿದೆ"

"ಏನೆಂದು ಬಣ್ಣಿಸಲಿ ನನ್ನಮ್ಮ
 ಪದಗಳೆ ಸಿಗುತ್ತಿಲ್ಲ ಎನಗೆ 
ಈ ಪೃಥ್ವಿಯು ಸಾಟಿಯಲ್ಲ ನಿನಗೆ 
ಶಿರಬಾಗಿ ನಮಿಸುವೆ ಎನ್ನ ಹರಸಮ್ಮ"



*ಶ್ರೀನಿವಾಸ್ *