Sunday, December 20, 2015

ನೆನಪಿನಂಗಳ

"ಕಲ್ಲಿನ ಹೃದಯದ ಕೋಟೆಗೆ 
ಎಲ್ಲಿ ನುಸುಳಿದೆ ನೀನು 
ಹೃದಯದ ಶಾಂತ ಚಿತ್ತವ 
ಕದಡಿ ಹೋದೆ ನೀನು"

"ಬಿರುಗಾಳಿಗೆ ಸಿಕ್ಕಿದ 
ಪತಂಗವಾಗಿದೆ ಮನಸ್ಸು 
ದಾರಿಯೇ ಕಾಣದಾಗಿದೆ 
ಬಸವಳಿದಿದೆ ಮನಸ್ಸು"

"ಹೃದಯದಲಿ ಉಳಿದೊಗಿವೆ 
ನಿನದೇ  ನೆನಪಿನ ಕುರುಹು 
ನಿನ್ನನೇ ನೆನೆನೆನೆದು 
ಮರುಗುತ್ತಿದೆ ಮನಸ್ಸು"


ಶ್ರೀನಿವಾಸ್ 






Monday, December 14, 2015

ನೆನಪಿನ ಉಡುಗೊರೆ

"ನೀ ಕೊಟ್ಟ ನೆನೆಪೆಂಬ ಉಡುಗೊರೆಯು 
 ಅಣುಕಿಸಿ ನಗುತಲಿದೆ ನನ್ನನ್ನೇ
ವಿಚಿತ್ರವಾದರೂ ನಿಜವಿದುವೆ  
ನೆನಸುವುದು ಈ ಮನ ನಿನ್ನನ್ನೇ"

"ಬತ್ತುವುದಿಲ್ಲ ನನ್ನೀ ಕನಸಿನ ಸಾಗರ 
ತುಂಬಿದೆ ನಿನ್ನದೇ ಸ್ಪೂರ್ತಿಯ ಸೆಲೆಯು 
ನೆನಪೊಂದೆ ಶಾಶ್ವತವು ಈ ಮನಕೆ 
ಅಲಕ್ಷಕ್ಕಿಲ್ಲ ಈ ಮನದಿ ನೆಲೆಯು"

"ನೀರೆರೆದು ನಾ ಬೆಳೆಸಿರುವೆ 
ನೀನೆಟ್ಟ ಸ್ಪೂರ್ತಿಯ ಸಸಿಯ 
ಹೂ ಬಿಟ್ಟು ಕಾಯುತಲಿಹುದು 
ನೀ ಮರಳಿ ಬರುವ ದಾರಿಯ" 



ಶ್ರೀನಿವಾಸ್ 

Thursday, December 10, 2015

ಪುಟ್ಟ ಸ್ನೇಹ

"ಭಾವನೆಯ ಅಲೆಗಳು ತೇಲಿ ತೇಲಿ ಬಂದವು 
ಹಂಚಿಕೊಳ್ಳಲೆಂದು ಪುಟ್ಟ ಹೃದಯಕ್ಕಾಗಿ ಕಾದವು 
ನೀ ಎದುರಾದೆ ಅಂದೇ ಭಾವನೆಗಳ ಅಲೆಗಳಿಗೆ 
ಮಂಕಾಗಿ ಹೋಯಿತು ಹೃದಯವು ಅಂದು ಅರೆಗಳಿಗೆ"

"ಹಂಚಿಕೊಂಡ ಭಾವನೆಗಳಿಗೆ ಸಿಕ್ಕಿತೊಂದು ರೂಪ 
ಉರಿಯಲಿ ಎಂದೆಂದೂ ಹೃದಯದಲಿ ನೀನಚ್ಚಿಟ್ಟ ದೀಪ 
ಹೃದಯದ ಅಂಗಳಕೆ ನೀನಾದೆ ಸುಂದರ ಕಾಮನಬಿಲ್ಲು 
ನಾಟ್ಯಂತರಂಗದಿ ನಲಿಯುತ್ತಿರುವ ಸುಂದರ ನವಿಲು"

"ಮುಚ್ಚಿಡಲು ಮನದೊಳಗೆ ಇನ್ನೇನೂ ಉಳಿದಿಲ್ಲ 
ನೀನಿರದ ಕ್ಷಣದಲಿ ನಗುವೆಂಬುದೆ ನನ್ನಲ್ಲಿಲ್ಲ 
ಕಣ್ಮುಚ್ಚಿ ಧ್ಯಾನಿಸುವೆ ನೀ ಎಲ್ಲಿದ್ದರೂ ನಗುತಲಿರು 
ದಯಮಾಡಿ ಈ ಪುಟ್ಟ ಸ್ನೇಹವ ನೀನೆಂದು ಮರೆಯದಿರು"



ಶ್ರೀನಿವಾಸ್  

Monday, December 7, 2015

ನಿನ್ನೊಲವು

"ಕರಗದಿರಲಿ ಕನಸು 
ಮರುಗದಿರಲಿ ಮನಸ್ಸು 
ಕಾಲಚಕ್ರ ಉರುಳುವುದು 
ಬಾಳು ಬೆಳಕಾಗುವುದು"

"ನಿಲ್ಲೊಲವಿಗೆ ಉಸಿರಾಗಿ 
ನಿನ್ನೊಡನೆ ಜೊತೆಯಾಗಿ 
ನಿನ್ನ ನೋವೆಲ್ಲವ ಸಂತೈಸಿ 
ಜೊತೆಗಿರುವೆ ನಾ ನಿನ್ನ ಹಿತೈಸಿ"

"ಅರಳಲಿ ಮುದುಡಿದ ಮೊಗವು 
ತೆರೆದುಕೊಳ್ಳಲಿ ಉದುಗಿದ ಚೆಲವು 
ನಿನ ಸ್ನೇಹದಿ ನಾ ನಲಿಯುವೆ 
ನಿನ್ನೊಲವಿಗೆ ನಾ ಕಾಯುವೆ"



ಶ್ರೀನಿವಾಸ್ 



Thursday, December 3, 2015

ಸಂಗಾತಿ

"ತುಂಬು ಚಂದ್ರನೇ ಮೊಗವಾಗಿ 
ಮಿನುಗುವ ನಕ್ಷತ್ರಗಳೇ ನಗುವಾಗಿ 
ಹಾಲು ಹುಣ್ಣಿಮೆಯೇ ನೀನಾಗಿ 
ನನ್ನ ಮುಂದೆ ನೀನಿರಲು 
ಮಾತುಗಳೇ ಹೊರಡುವುದಿಲ್ಲ "

"ಕಣ್ಣ ರೆಪ್ಪೆಯ ಮಿಟುಕಿಸದೆ 
ಅತ್ತಿತ್ತ ಚಿತ್ತವ ಕದಲಿಸದೆ 
ಮತ್ಯಾರನೋ ಕಣ್ಣೆತ್ತಿಯು ನೋಡದೆ 
ನನ್ನ ಮುಂದೆ ನೀನಿರಲು 
ಮಾತುಗಳೇ ಹೊರಡುವುದಿಲ್ಲ

"ನಿನ್ನ ನಗುವಲಿ ನಾ ಕಲೆತು 
ನನ್ನೊಲವಲಿ ನೀ ಬೆರೆತು 
ಕಳೆದು ಹೋಗಲಿ ದಿನದ ಹೊತ್ತು 
ನನ್ನ ಮುಂದೆ ನೀನಿರಲು 
ಮಾತುಗಳೇ ಹೊರಡುವುದಿಲ್ಲ


ಶ್ರೀನಿವಾಸ್ 




Wednesday, December 2, 2015

ಪಯಣ

"ಎಂತ ವಿಚಿತ್ರವೀ ಪಯಣ 
ಭಾವನೆಯ ಅಲೆಗಳ ಮೇಲೆ 
ಎದೆಯುಬ್ಬರದ ನೋವನೆ ಮೀರಿ 
ಸಾಗುವ ಬದುಕಿನ ಪಯಣ"

"ಭಾವನೆಗಳ ಗೊಂದಲದ ಗೂಡಿನಲಿ 
ಮೌಲ್ಯವೇ ಕಾಣದು ಭಾವನೆಗಳಿಗೆ 
ಬಲು ಲೆಕ್ಕಾಚಾರವೆ ಬದುಕೆಲ್ಲ 
ಹಾದಿಯ ತಪ್ಪದಿರಲಿ ಪಯಣ"

"ನೋವು-ನಲಿವಿನ ಕುರುವುಂಟು 
ದುಃಖ-ದುಮ್ಮಾನದ ಕಲೆಯುಂಟು 
ನೋವ ನುಂಗುತ ಸಾಗುತಲಿರಲಿ 
ಶಾಂತಿಯ ನಗೆಬೀರಲಿ ಪಯಣ"
  


ಶ್ರೀನಿವಾಸ್ 


Wednesday, November 25, 2015

ಮನನ

"ಭಾವನೆಗಳ ಬಿರುಗಾಳಿಗೆ 
ಸಿಲುಕಿ ನಲುಗಾಡಿದೆ 
ಹೊರಬರಲು ಆಗದೆ 
ಬಳಲಿ ಬಸವಳಿದಿದೆ ಮನ"

"ಮನದಲ್ಲಿಯೇ ಗುನುಗುನಿಗಿ  
ಭಾವನೆಗಳಿಗೆ ಬೆಲೆತೆತ್ತು 
ಬಾಳದಾರಿಯಲಿ ದಾರಿಕಾಣದೆ 
ಕಂಗೆಟ್ಟು ಕುಳಿತಿದೆ ಮನ"

"ಬದುಕು-ಬವಣೆಯಲಿ 
ಬದಲಾಗಲು ಬಯಸಿ 
ಬದಲಾವಣೆಯ ಬಿರುಗಾಳಿಗೆ 
ಎದುರು ನೋಡಿದೆ  ಮನ"



ಶ್ರೀನಿವಾಸ್ 



Wednesday, November 18, 2015

ಚಿಂತೆಯ ಸುಳಿಯಲಿ

"ಅಪ್ರಯೋಜಕ ಚಿಂತನೆಯೊಂದು 
ಮಿದುಳು ನಾಡಿಯನ್ನೋಕ್ಕಿ 
ಗಹಗಹಿಸಿ ನಗುತಲಿದೆ 
ಮನದ ಶಾಂತತೆಗೆ ಕಲ್ಲಾಕಿ"

"ದಾರಿಯ ಹುಡುಕುತ 
ಮನಸ್ಸಿಂದು ಬಳಲಿದೆ 
ಚಿಂತೆಯ ಸುಳಿಯಲಿ 
ಸಿಲುಕಿ ನರಳಾಡಿದೆ"

"ಎಲ್ಲಿ  ಹುಟ್ಟಿತ್ತೆಂದು 
ಅರಿವಿಗೆ ಬಾರದಾಗಿದೆ 
ಅಶಾಂತಿಯ ಅಲೆಯನೆಬ್ಬಿಸಿ 
ಮಂಕಾಗಿಸಿದೆ ಮನವ"

"ಹೊರ ಬರದಹೊರೆತು 
ಬದುಕು ಸಾಗುವುದಿಲ್ಲ 
ಬಿಡಿಸಲಾಗದ ಕಗ್ಗಂಟ್ಟಿದು 
ಚಿಂತಿಸುವುದರಲ್ಲಿ  ಅರ್ಥವಿಲ್ಲ"


ಶ್ರೀನಿವಾಸ್  


Sunday, November 15, 2015

ನಂಬಿಕೆ

"ಭಾವನೆಗಳ ಬಿರುಕಿನಲಿ 
ಬದುಕೆಲ್ಲವೂ ದುಸ್ತರವು 
ಹಿಂಸಿಸುವ ನೆನಪಿನಲಿ 
ಮಿಡುಕಾಡಿದೆ ಮನವು"

"ಪ್ರಶ್ನೆಗಳಿಗೆ ಉತ್ತರವು 
ಕಾಣದಾಗಲು ಹುಡುಕುತ್ತಿದೆ 
ಮನವು ಮರಳುಗಾಡಿನಲ್ಲಿ 
ಗೊಂದಲಗಳ ಕಾಡಿನಲ್ಲಿ"

"ನಂಬಿಕೆ ಎಂಬುದು 
ಬಲು ಶ್ರೇಷ್ಠವು ಜಗದಲ್ಲಿ 
ಶ್ರಮಿಸಬೇಕು ಮನವು 
ಗಳಿಸಲು ನಂಬಿಕೆಯನು"


ಶ್ರೀನಿವಾಸ್ 

 

Friday, November 13, 2015

ಚಂದ್ರ

"ಬೆಳದಿಂಗಳ ಹುಣ್ಣಿಮೆಯಲಿ 
ಚಂದ್ರನೇ ಕಾಣುತ್ತಿಲ್ಲ 
ಸ್ಪೂರ್ತಿಯೇ ನೀನಿಲ್ಲದೆ 
ಜೀವನದಲಿ ನಗುವಿಲ್ಲ"

"ಬಾಳಿನ ದಾರಿಯಲಿ 
ನೂರೆಂಟು ಕನಸುಗಳು 
ಸಾಕಾರಗೊಳ್ಳದೆ ನರಳಿವೆ 
ಚಂದ್ರನ ಅರಸಿದ ಚಕೋರದಂತೆ"

"ಮಿಡಿತದ ಏರಿಳಿತವು 
ಎದೆಬಾರವ ತಂದಿದೆ 
ಉಳಿದುಹೋಗಿವೆ ನುರ್ರೆಂಟು 
ಮಾತುಗಳು ಮನದೊಳಗೆ"



ಶ್ರೀನಿವಾಸ್ 

Tuesday, November 10, 2015

ಕಂಬನಿ

"ತುಂಬಿದ ಕಂಗಳಲಿ 
ಮಂಜಿನ ಹನಿಯೊಂದು 
ನಿನ್ನನೆ ನೆನೆದು ದಿನದಿನವು
ಜಾರುತಲಿದೆ ಅನುಕ್ಷಣವು"

"ಒಲ್ಲದ ಮನಸ್ಸಿನಲಿ 
ನಾ ದೂರ ಸರಿದಿರುವೆ 
ಕಾಡುತಲಿವೆ ನೆನಪೆಲ್ಲವು 
ನೀನಿರದ ಪ್ರತಿಕ್ಷಣವು"

"ಬತ್ತಿಹೋಗುವ ಮುನ್ನ 
ಬಯಸಿವೆ ಕಂಗಳು 
ನೀನೆದುರಾದ ಕ್ಷಣದಿ 
ಕಂಬನಿಯ ಧಾರೆಯನೆರೆಯಲು"



ಶ್ರೀನಿವಾಸ್ 


Monday, September 28, 2015

ಭಾವಾಂತರಂಗ

"ನಿನ್ನ ನೆಚ್ಚಿಸಲೆಂದು 
ನಾ ಕತೆ ಎಣೆಯುವುದಿಲ್ಲ 
ಕವಿತೆಯ ಬರೆಯುವುದಿಲ್ಲ 
ಅವೆಲ್ಲ ಅಮೂರ್ತ ಭಾವವಷ್ಟೇ"

"ನಿನ್ನೋಡಲ ಬಿಸಿ ನನ್ನೆಡೆಗೆ 
ಸಾಗಿ ತುಸು ಗಂಭೀರತೆಯ  
ನನ್ನ ಒಡಲಲಿ ಹುಟ್ಟುಹಾಕಿದೆ 
ಅವೆಲ್ಲ ನಿಷ್ಕಾಮ ಭಾವವಷ್ಟೇ"

"ನಿನ್ನೆಡೆಗಿನ ನನ್ನ ತುಡಿತವು 
ನಿನ್ನೊಲವಿಗೆ ಎನ್ನ ಮಿಡಿತವು 
ಅನುಕ್ಷಣವು ನನ್ನನು ಕಾಡಿವೆ 
ಅವೆಲ್ಲ  ನಿಸ್ಕಲ್ಮಸ ಭಾವವಷ್ಟೇ"

"ನೀನೆರೆದ ಪ್ರೀತಿಯ ಧಾರೆ
ಅರಿಯಲಿ ಜಲಧಾರೆಯಾಗಿ
ನನ್ನೆದೆಯಲಿ ಕೊನೆಯುಸಿರವರೆಗೂ 
ಅವೆಲ್ಲ ನಿಸ್ವಾರ್ಥ ಭಾವವಷ್ಟೇ"



ಶ್ರೀನಿವಾಸ್ 

Tuesday, September 22, 2015

ನೀ ಆಗು

"ಬಿರಿವ ಭೂಮಿಗೆ ಮಳೆಯನಿಯಾಗಿ
ಕೊರೆವ ಚಳಿಗೆ ಎಳೆಬಿಸಿಲಾಗಿ
ಮರುಗುವ ಮನಕೆ  ಆಸರೆಯಾಗಿ 
ಪ್ರೀತಿಸುವ ಹೃದಯಕೆ ಆಸರೆಯಾಗು"


"ನಿನ್ನನೇ ಹುಡುಕುವ ಕಂಗಳಿಗೆ
ನಿನಗಾಗೆ ತುಡಿಯುವ ಮನಗಳಿಗೆ
ಪ್ರೀತಿಯ ಬಯಸುವ ಹೃದಯಗಳಿಗೆ 
ಪ್ರೀತಿಯನ್ನೆರೆವ ಧಾರೆಯಾಗು"


"ಸ್ನೇಹ-ಪ್ರೀತಿಯ ಸೆಲೆಯಾಗಿ
ಕರುಣೆ-ಮಮತೆಯ ಖನಿಯಾಗಿ
ಒಲವಿಗೆ ಗೆಲುವಿನಾಸರೆಯಾಗಿ
ಎಲ್ಲರೊಡನೆ ನೀ ಒಂದಾಗು"



ಶ್ರೀನಿವಾಸ್






Monday, September 14, 2015

ಪುಟ್ಟ ಹೆಜ್ಜೆಗಳು

"ಪುಟ್ಟ ಪುಟ್ಟ ಹೆಜ್ಜೆಗಳು 
ನೀನಿಟ್ಟೆ ಎದೆಯೊಳಗೆ 
ಸರಿಗಮದ ಶ್ರುತಿಯೊಂದು 
ಮೂಡೈತೆ ಮನದೊಳಗೆ"

"ನೀನಾಡುವ ಉಸಿರಲ್ಲಿ 
ತಂಗಾಳಿಯ ತಂಪಾಯ್ತೆ 
ನಡೆದಾಡುವ ದಾರಿಯು 
ನಿನ್ನ ಸುಳಿವ ನೀಡೈತೆ"

"ಮುಂಗಾರಿನ ಮಳೆಯಾಗಿ 
ನಿನ್ನ  ನಗುವು ಸುರಿಯಲಿ 
ನಿನ್ನ ಬದುಕು  ಬನವಾಗಿ 
ಅಚ್ಚ ಹಸಿರಾಗಿ ತೂಗಾಲಿ" 



ಶ್ರೀನಿವಾಸ್ 

Monday, September 7, 2015

ನಿನ್ನೊಲವು

"ಚುಮು ಚುಮು ಚಳಿಯು 
ನಿನ್ನೊಲವನು ಬೇಡಿದೆ 
ನಲುಗಿಹ  ಹೃದಯವು 
ನಿನ್ನಾಸರೆಯ ಕೋರಿದೆ"

"ಇಂದೇಕೋ ನನ್ನಯ  
ಕಂಗಳು ನಿನ್ನನೆ ಹುಡುಕಿವೆ 
ನೀ ಬರುವ ದಾರಿಯನೆ 
ಮಿಡುಕಾಡದೆ ನೋಡಿವೆ"

"ಬರುವೆಯ ನೀನು? 
ನನ್ನೀ ಆಹ್ವಾನಕೆ  ಒಪ್ಪಿ 
ಬಂದೊಡನೆ ನಲಿವುದು 
ಈ ಮನವು ನಿನ್ನನು ಅಪ್ಪಿ"




ಶ್ರೀನಿವಾಸ್ 





Thursday, August 27, 2015

ಮೌನ

"ಎಂದೂ ಇಲ್ಲದ ಈ ಮನಸ್ಸು 
ಇಂದೇಕೋ ಮೌನವನು 
ಬಿಗಿದಪ್ಪೆಂದು ತಾಕಿತುಮಾಡಿದೆ 
ನಿನಗಾಗಿಯೇ ನಾ ಮೌನಿಯಾಗುವೆ"

"ಮನಸ್ಸಿಗೆ ಆಗುವ ಗಾಯವು 
ಮೈಗೆ ಆಗುವ ಗಾಯಕ್ಕಿಂತ ಹಿರಿದು 
ಕೆದಕಿ ಕೆದಕಿ ಹುಣ್ಣಾಗಿದೆ ಹೃದಯ 
ಅದಕ್ಕೆಂದೇ ನಾ  ಮೌನಿಯಾಗುವೆ"

"ಹೃದಯದಲಿ ಉದುಗಿಟ್ಟ ನೋವು
ಹೊಗೆಸೂಸುವ ಬಿಸಿ ಕೆಂಡದಂತೆ 
ಇಂದಲ್ಲಾ ನಾಳೆ ಹೊರಬೀಳಲೇಬೇಕು 
ಆ ದಿನಕ್ಕಾಗಿಯೇ ನಾ ಮೌನಿಯಾಗುವೆ"



ಶ್ರೀನಿವಾಸ್ 



Monday, August 24, 2015

ಒಲ್ಲದ ಜೀವ

"ಇಳೆಯ ಸಹನೆಯು ನಿನಗಿದೆ 
ಜೀವರಾಶಿಯು ಅದ ಕಂಡಿದೆ 
ಮಾಣಿಕ್ಯದ ತುಣುಕಂತೆ ನೀನು 
ನಿನ್ನ ನೀನು ಅರಿಯುವೆಯೇನು"

"ಮುಗ್ದಮನಸ್ಸಿಗೆ ಬಿದ್ದ ಬರೆಗಳು 
ಕಣ್ಮುಂದೆ ಕಂಗೊಳಿಸಿ ಕಾಡಿವೆಯೆನು
ಬಿಚ್ಚಿಡು ಮನದ ದುಮ್ಮಾನವನೆಲ್ಲ 
ಮನಶಾಂತಿಯ ಗಳಿಸುವೆ ನೀನು"

"ಒಪ್ಪದ ಮನಗಳೊಡನೆಯ ಜೀವನ 
ಕಾಡಿಸಿ, ಬೇಡಿಸಿ ಸುಡುವಂತದು 
ಒಲ್ಲದ ಮನಸ್ಸಿನ ಈ ಬದುಕು 
ದಿನವು ಸತ್ತು ಬದುಕುವಂತದು"




ಶ್ರೀನಿವಾಸ್ 


Sunday, August 23, 2015

ಕಂಗಾಲು

"ಕಮರಿ ಹೋಗದಂತೆ 
ಆ ನಿನ್ನ ಮುಗ್ದ ನಗುವು 
ಏನೆಲ್ಲಾ ಮಾಡಲಿ ಹೇಳು 
ಚಿಂತೆಯ ಗೂಡಾಗಿದೆ ಮನವು"

"ನೀನಿಲ್ಲದ  ಕ್ಷಣ 
ಕಾಡ್ಗಿಚ್ಚೆ ಎನ್ನ ಆವರಿಸಿದಂತೆ 
ನೀ ಎದುರಾದ ಆ ಕ್ಷಣ 
ಕಿಚ್ಚನು ನಂದಿಸೋ ಧಾರೆಯಂತೆ"

"ಕಂಗಾಲಾಗದಿರಲಿ ಮನ 
ಕಾಯುವ ಕಂಗಳು ನಿನ್ನೋಡನಿರಲು 
ಗತಿಸುವುವು ನೋವಿನ ದಿನ 
ಕಾಲಚಕ್ರವು ಉರುಳಿರಲು"




ಶ್ರೀನಿವಾಸ್ 





Friday, August 21, 2015

ಶುಭ ವಿವಾಹ

"ಹೊಸಬಾಳಿನ ಹೊಸ್ತಿಲಲಿ 
ನವಜೋಡಿಗಳು ನಿಂತು 
ನಾಳಿನ ಬದುಕಿನ ಕನಸ
ಕಟ್ಟುವುದೇ ಶುಭವಿವಾಹ"

"ಮೂರು ಗಂಟಿನಲಿ 
ಈ ಜೀವನವು ಉಂಟು 
ತೊರೆದು ಬಾಳಬೇಕಿದೆ 
ಅತಿಯಾದ ವ್ಯಾಮೋಹ"

"ಹರಸುವ  ಹಿರಿಯರು 
 ಶುಭಕೋರುವ ಕಿರಿಯರು 
ಸಂತೋಷದ ಉತ್ತುಂಗದಲಿ 
ತೇಲುವ ಅಮೃತ ಘಳಿಗೆ"

"ಏಳು-ಬೀಳುಗಳು ಇರಲಿ 
ದುಃಖ-ದುಮ್ಮನವೇ ಬರಲಿ 
ಸಮತೂಕದ ಸಹಬಾಳ್ವೆಯಾ 
ಬದುಕೇ ಬೃಂದಾವನ"



ಶ್ರೀನಿವಾಸ್ 




Monday, August 17, 2015

ಉಲ್ಲಾಸ

"ಸ್ವಚ್ಚಂದವು ನಿನ ನಗುವು 
ಬೆಳದಿಂಗಳ ಚಂದ್ರನಂತೆ 
ರಸಸ್ವಾದವು ನಿನ ನುಡಿಯು 
ಕಬ್ಬಿನ ರಸ ಸವಿದಂತೆ" 

"ಗುನುಗುವ ನುಡಿಯೆಲ್ಲ 
ಹಕ್ಕಿಗಳ ಇಂಚರದಂತೆ 
ಮುನಿಸಿನ ನಿನ ಮೊಗವು 
ತುಂಬು ಚಂದ್ರನಂತೆ"

"ನನ್ನ ಒಡಲೆಲ್ಲವು 
ತುಂಬಿದೆ ಉಲ್ಲಾಸದಿಂದ  
ನಿಜ ತಿಳಿದೆಯ ಏನೆಂದು 
ನಾ ನಗುತಲಿರುವೆ ನಿನ್ನಿಂದ" 




ಶ್ರೀನಿವಾಸ್ 



ನಗು ಮೊಗ

"ನೀ ನಕ್ಕರೆ 
ನನಗದೆ ಸ್ವರ್ಗ 
ಚಿಲುಮೆಯಿಂದ 
ಹೊರ ಹೊಮ್ಮುವ
ಕಾರಂಜಿಯಂತೆ"

"ಮುದ್ದು ನಗುವ 
ಕನ್ಗಾವಲಿಟ್ಟು ನಾ 
ಕಾಯಬೇಕು ಎಂದೂ 
ತೊರೆದು ಹೋಗದಂತೆ 
ನಿನ್ನ ಮುದ್ದು ಮೊಗವ" 

"ಸೊಗಸುಗಾತಿಯು 
ನೀ ಎನ್ನ ಜೊತೆಗಾತಿ 
ನೀನೆರೆದ ಪ್ರೀತಿ 
ಆವರಿಸಿದೆ ನನ್ನ 
ಈ ಹೃದವನೆಲ್ಲಾ" 

"ಸರಿಯದಿರು ನಿ ದೂರ
ನನ್ನ ಏಕಾಂಗಿಯಾಗಿರಿಸಿ 
ಭರಿಸಲಾಗದು ನೋವ 
ಬೆಂಬಿಡದೆ ಕಾಡುವುದು 
ನಿನ್ನಿಲ್ಲದ ಪ್ರತಿ ಕ್ಷಣವೂ"





ಶ್ರೀನಿವಾಸ್ 






Thursday, August 13, 2015

ಚಂದನದ ಗೊಂಬೆ

"ನೋಡುಬಾ ಚೆಲುವೆ 
ಚುಕ್ಕಿ ಚಂದ್ರಮನ 
ನಿನಗಾಗಿ ಬಂದಿಹನು 
ತಾರೆಗಳ ಜೊತೆಗೂಡಿ"

"ಚಂದನದ ಗೊಂಬೆ
ನೀನೆಂದು ಚಕಿತನಾದ 
ಕದ್ದು ಕದ್ದು ನಿನ್ನ ನೋಡಿ 
ನಿಂತಲ್ಲೆಯೇ ನಲಿದ"

"ಚಿಂತಿಸುವೆ ನೀ ಏನನ್ನ 
ಚಂದನದ ಗೊಂಬೆಯಾಗಿ 
ತಾರೆಗಳ ಹೊಳಪಿನ 
ಮುದ್ದು ಮಗುವಾಗಿ" 



ಶ್ರೀನಿವಾಸ್ 


Tuesday, August 11, 2015

ಮರಿಗುಬ್ಬಿ

"ಗುಬ್ಬಿಯಂತೆ ನಿನ್ನ 
ಬಚ್ಚಿಟ್ಟು ಹೃದಯದಲಿ 
ಇಣುಕಿನೋಡಬೇಕು 
ನಿನ್ನ ಕ್ಷಣ ಕ್ಷಣವೂ "

"ಸುತ್ತುತ್ತಿರು ನೀ ನನ್ನ 
ಚಿವ್ ಚಿವ್ ಎನ್ನುವ 
ಮರಿಗುಬ್ಬಿಯಂತೆ  
ಮುಗಿಲ ಅಂಚಿನಲಿ"

"ಪಿಳಿ ಪಿಳಿ ಮಿಡುಕುವ 
ನನ್ನಯ ನಯನದಲಿ 
ಬಂಧಿಸುವೆ ನಿನ್ನನ್ನು 
ತೊರೆಯದಂತೆ ನನ್ನನ್ನು"



ಶ್ರೀನಿವಾಸ್ 



ಅನರ್ಘ್ಯ ರತ್ನ

"ಮೈನಾ ಹಕ್ಕಿಯ ನಿನಾದ 
ನಿನ್ನ ಕೊರಳ ದನಿಯಲಿ 
ಹಂಸದ ನರ್ತನವು 
ನೀನಿಡುವ ಅಡಿಗಳಲಿ"

"ತಲ್ಲೀನನಾಗಿ ಕೇಳಬಯಸುವೆ 
ನೀನಾಡುವ ನುಡಿಗಳನು 
ಕಲೆಯಾಕಬಯಸುವೆ 
ನಿನ್ನೊಡನೆ ಕಳೆವ ಕ್ಷಣಗಳನು"

"ಅದೇನೋ ಖುಷಿ ನನ್ನೊಳಗೆ 
ನಿನ್ನ ಸ್ನೇಹದ ಪರಿಯ ಕಂಡು 
ಕಳೆದುಕೊಳ್ಳಲಾರೆನು ಎಂದೂ 
ನಿನ್ನಂತ ಅನರ್ಘ್ಯ ರತ್ನವನು"



ಶ್ರೀನಿವಾಸ್ 


Friday, August 7, 2015

ಹೊನ್ನು

"ಹೊನ್ನು, ಹೆಣ್ಣು ಮಣ್ಣಲ್ಲೇ 
ಮನುಷ್ಯನ ಮೂರುದಿನದ ಬಾಳು 
ಜೀವನ ಪುಟವ ತಿರುವಿದಂತೆ 
ಹಿಂದೆ ಹೋದವರ ಗೋಳು"

"ನಿಜವರಿಯಬೇಕು ಮನುಜ 
ಹಣವಿರುವುದು ಮನುಜಗಾಗಿ 
ಮನುಜನಿರುವುದೇ ಹಣಕಲ್ಲ 
ಇದನರಿತವ ನಿಜ ಯೋಗಿ"

"ಹಣಕ್ಕಾಗಿ ಕಳೆದುಕೊಂಡ ಮಾನ 
ಮರಳಿಬಾರದು ಎಂದೆಂದೂ 
ಇರುವುದರಲ್ಲಿ ಸಾಗಲಿ ಜೀವ 
ಕಷ್ಟಗಳೇ ಬಾರವು ಮುಂದೆಂದೂ"



ಶ್ರೀನಿವಾಸ್ 






Wednesday, August 5, 2015

ಮನದ ಮಾತು

"ಚಂದದ ಮೊಗವ 
ಕರದಲ್ಲಿ ಮೊಗೆದು 
ಕಂಗಳಲಿ ಕಣ್ಣಿಟ್ಟು 
ನಿನ್ನೆ ನೋಡುವಾಸೆ"

"ನಿನ್ನ ಭುಜಕೆ 
ತಲೆಯನಿರಿಸಿ 
ಏಕಾಂತದಲಿ ತೇಲಿ 
ದಿನಕಳೆಯುವ ಆಸೆ"

"ಜೊತೆ ಇರಲು ನೀನು 
ನೂರೆಂಟು ತರಲೆಗಳು 
ಜೀಡಿಸಿ , ರೇಗಿಸಿ 
ಮುದ್ದಿಸಲು ಆಸೆ"

"ಆದರೂ ಬಾದಿಸಿದೆ ಒಡಲು 
ಇಂದೇಕೋ ಬಯಸುತ್ತಿದೆ  
ನಿನ ಮಡಿಲಲ್ಲಿ ತಲೆಯಿರಿಸಿ 
ನೋವೆಲ್ಲವ ತೋಡಿಕೊಳ್ಳುವಾಸೆ"



ಶ್ರೀನಿವಾಸ್ 




ಜೀವನ ಜ್ಯೋತಿ

"ತಂಗಾಳಿಯು ಸುತ್ತುತ್ತಿದೆ 
ನನ್ನನ್ನೇ ನೀ ಸುತ್ತಿದಂತೆ 
ಮೈಯೆಲ್ಲವು ರೋಮಾಂಚನ 
ನನ್ನನ್ನು ನೀ ಸೋಕಿದಂತೆ"

"ಎಂದಿಲ್ಲದ ಆನಂದವು 
ಇಂದೇಕೋ ನನ್ನಲ್ಲಿ 
ಏನ್ನೆಲ್ಲವು ಆಗುತ್ತಿದೆ 
ನನ್ನೊಲವೆ ನಿನ್ನಲ್ಲಿ" 

"ಮನಸ್ಸಿಂದು ಜಿಗಿದಾಡಿದೆ 
ಸೊಗಸಿನ ಉನ್ಮಾದದಿಂದ 
ನೀನಿರಲು ನನ್ನೊಡನೆ
 ದಿನವೆಲ್ಲವು ಸಂತಸದಿಂದ"

"ಇದಕ್ಕೆಲ್ಲವು ನೀ ಕಾರಣ 
ನೀ ಜೀವನ ಜ್ಯೋತಿ 
ಹರಸಲಿ ಅಗಲಿದ ಆತ್ಮವು 
ದಯಪಾಲಿಸಿ ಸರಿದಾರಿಯ ಮತಿ"



ಶ್ರೀನಿವಾಸ್ 






Monday, August 3, 2015

ಅಂತರಾತ್ಮ

"ಮುಚ್ಚುಮರೆ ಇಲ್ಲದೆಲೆ 
ಬಿಚ್ಚಿಟ್ಟ ನುಡಿಗಳಿಗೆ 
ದಕ್ಕಿದ  ಬಿರುದುಗಳ 
ತುಂಬಿಲು ಸ್ಥಳವಿಲ್ಲ"

"ನುಡಿವ ಮಾತುಗಳು 
ಕಹಿಯಾದರೂ ಅದರ 
ಹಿಂದಿರುವ ಭಾವಗಳು 
ಕ್ಷೀರದಷ್ಟೇ ಸಿಹಿಯಷ್ಟೆ"

"ಸುಳ್ಳನ್ನೇ ಉಂಡು 
ಸುಳ್ಳಲ್ಲೇ ಮಿಂದು 
ಬದುಕುವ ಜೀವಗಳ 
ಕಂಡು ಧಣಿದಿದೆ ಜೀವ"

"ಮನದೊಳಗೆ ಹಾಲಾಹಲ 
ನುಡಿಗಳಲಿ ಜೇನರಸ 
ಸುರಿಸುವ ಮನಗಳ 
ಕಂಡು ಮರುಗಿದೆ ಜೀವ"

"ಇಷ್ಟವೆಂದರೂ ನುಡಿಯೆ 
ಮನಸಾಕ್ಷಿಯ ಕೊಂದು 
ಕಷ್ಟವಾದರೂ ನುಡಿವೆ 
ಸಂಕಟದಲಿ ಬೆಂದು"

"ಅರಿಯಲಿ ಮನದಾಳವ 
ತಿಳಿಯಲಿ ನಿಜ ಪ್ರೇಮವ 
ಬಿಚ್ಚಿಡುವೆ ಮನದ ಮಾತ 
ಹರಸೆನ್ನ ಅಗಲಿದ ಆತ್ಮ"



ಶ್ರೀನಿವಾಸ್ 




Friday, July 31, 2015

ಅಶಾಂತಿಯ ಅಲೆಗಳು

"ಕಮಲ ಹುಟ್ಟುವುದು ಕೆಸರಿನಲ್ಲಿ 
ಮಾಣಿಕ್ಯ ಜನಿಸುವುದು ಕೆಟ್ಟ ಒಡಲಲ್ಲಿ 
ಮೌಲ್ಯಗಳಿಗೆ ಬೆಲೆಯೇ ಇಲ್ಲ ಜಗದಲ್ಲಿ 
ಹೀನರಿಗೆ ಕಾಲವು ಈ ಸಮಾಜದಲ್ಲಿ"

"ಭಾವೋದ್ವೇಗವ ಬಂಧಿಸಲು 
ಒಡಲ ಯಾತನೆಯ ಬಣ್ಣಿಸಲು 
ಬರಿದಾಗಿವೆ ಪದಗಳ ಸಾಲು 
ಆವರಿಸಿದೆ ಶೋಕದ ಕೆಮ್ಮುಗಿಲು"

"ಹೃದಯವೆಂಬ ಶಾಂತ ಸಾಗರದಲಿ  
ಅಶಾಂತಿಯ ಅಲೆಗಳ ಮೊರೆತದಲಿ 
ಬದುಕುತ್ತಿದೆ  ಮನ ನರಳುತಲಿ   
ಬದುಕೆಂಬುದೆ ನಸ್ವರವೆಂಬಂತೆ" 

"ದೃತಿಗೆಡದೆ ಸಾಗಬೇಕಿದೆ ಇಂದು 
ಅಗಲಿದ ಚೇತನವೆ ಹರಸು ನೀನೆಂದು 
ಕಡುಕಷ್ಟಗಳೇ ಇರುವುದಿಲ್ಲ ಎಂದೆಂದು 
ಕಾಯುವುದು ಅಗಲಿದ ಆತ್ಮವು ಮುಂದು"




ಶ್ರೀನಿವಾಸ್ 










Thursday, July 16, 2015

ಪ್ರಾಯಶ್ಚಿತ

"ಮಾರ್ದನಿಸಿವೆ  ಹೀನರ ನುಡಿಗಳು 
ಕಿವಿಯ ತಮಟೆಯೇ ಅರಿದೋಗುವಂತೆ 
ಕಂಪಿಸುತ್ತಿದೆ ಎದೆಯು ಒಂದೇಸಮನೆ 
ಗುಂಡಿಗೆಯೇ ಸಿಡಿದು ಛಿದ್ರವಾದಂತೆ"

"ನಿನ್ನೀ ಮೌನವೇ ಸರಿಯಾದ ಉತ್ತರ 
ನಾನ್ನೊಳಗಿನ ಬಿಡಿಸಲಾಗದ ಪ್ರಶ್ನೆಗಳಿಗೆ 
ದುಡುಕಿದ ಪಾಪಪ್ರಜ್ಞೆಯು ಕಾಡುತ್ತಿದೆ 
ನಿನ್ನ ಮುಂದಿಟ್ಟ ನನ್ನಯ ನುಡಿಗಳಿಗೆ"

"ಅನ್ಯತಾ ಭಾವಿಸದಿರು ನನ್ನ 
ನಿನ್ನಯ ಹಿತ ಕಾಯುವ ಕಾವಲುಗಾರ 
ನನ್ನದೊಂದೇ ತುಡಿತವು ಹಗಲಿರುಳು  
ಆಗಲು ದುಃಖ-ದುಮ್ಮಾನದಲಿ ಜೊತೆಗಾರ"

"ಮನ್ನಿಸು ಎನ್ನಲು ಮುಖವಿಲ್ಲ 
ಪಶ್ಚ್ಯಾತಾಪವೇ ಸರಿಯಾದ ಶಿಕ್ಷೆ 
ನಾ ನಿನ್ನಲಿ ಬೇಡುವುದೊಂದೇ 
ನೋವಿನಲಿ ಪಾಲುಗಾರಿಕೆಯ ಭಿಕ್ಷೆ"




ಶ್ರೀನಿವಾಸ್ 



Wednesday, July 15, 2015

ಸಮಾಜದ ಕಣ್ಣು

"ಹೆಣ್ಣೆಂದು ಬರಿ ಮಾಂಸದ  ಮುದ್ದೆಯಲ್ಲ 
ಕರುಣೆ, ಪ್ರೀತಿ, ಸ್ನೇಹಗಳ ಸಾಕಾರ ರೂಪ 
ಅವಳಲ್ಲಿ ಹರಿವುದು ಬರಿ ರಕ್ತವಲ್ಲ 
ಸಹೋದರತೆಯ ಜಲಧಾರೆ "

"ಮೋಹದ ಕಣ್ಣಿನಲಿ ಕಾಣುತ್ತಿದೆ 
ಸಮಾಜ ಅನುದಿನ, ಅನುಕ್ಷಣ 
ಅರಿದು ಹಂಚಿ ತಿನ್ನುವಂತೆ 
ಜನುಮದಾತೆಯನ್ನೇ ಅನವರತ"

"ಮೂಡಲಿ ಮನದೊಳಗೆ 
ಗೌರವಿಸುವ  ಭಾವಗಳು  
ಕಾಯ್ದುಕೊಳ್ಳಬೇಕು ನೀ ಹೆಣ್ಣಾಗಿ 
ಆ ಸ್ಥಾನವ ಸಮಾಜದ ಕಣ್ಣಾಗಿ "

"ಅರಿಬಿಡದಿರು ನಿನ್ನ ಮನವ 
ಅದು ಬಯಕೆಯ ಹುಚ್ಚು ಕುದುರೆ  
ಕ್ಷಣಿಕ ಕಾಮನೆಗೆ ಮೈಮರೆಯದಿರು  
ಹೋದ ಮಾನ ಬಾರದೆಂಬುದ ಮರೆಯದಿರು "


ಶ್ರೀನಿವಾಸ್ 






Sunday, July 12, 2015

ಜೀವಾಳ

"ಕಳೆದುಕೊಂಡ ಜೀವವನೇ 
ನೆನೆಯುತ್ತಿದೆ ಮನವು 
ದುಃಖ-ದುಮ್ಮಾನದ 
ಅಲೆಗಳು ಭೋರ್ಗರೆವಂತೆ " 

"ಏಕಾಂಗಿತನವು ಬಿಗಿದಪ್ಪಿದೆ 
ಬೆಂಬಿಡದ ಬೇತಾಳದಂತೆ 
ಬೇಸರದ ಕಾರ್ಮೋಡವು 
ಉಲ್ಲಾಸವನೆ ನುಂಗಿದೆ"

"ಯಾರು ಅರಿಯರು 
ಮನದ ವೇದನೆಯ
ಬಲು ಮಾದಕಪ್ರಿಯರು 
ಮನವನೆಂದು ಅರಿಯರು"

"ಮನ  ಹುಡುಕುತ್ತಿದೆ  
ಅಗಲಿದ ಜೀವವನೇ 
ಸಿಕ್ಕಿದೊಡನೆ ಬಿಗಿದಪ್ಪಿ 
ಕಂಬನಿಯ ಧಾರೆಯನೆರೆವಂತೆ "

"ತುಡಿವುದು ಮನ 
 ಅಗಲಿದ ಜೀವದೆಡೆಗೆ 
ಹೊಣೆಗಾರಿಕೆಯ ಹೆಗಲಮೇಲಿಟ್ಟು
ಗತಿಸಿದ ಆತ್ಮದೆಡೆಗೆ"
  



ಶ್ರೀನಿವಾಸ್ 












Friday, July 10, 2015

ಸಜ್ಜನಿಕೆ

"ಯಾರು ಉತ್ತಮರು ಈ ಇಳೆಯೊಳು 
ಉತ್ತಮರಂತೆ ಸ್ವಯಂ ಬಿಂಬಿತರು 
ಸಜ್ಜನರಂತೆ ವೇಷಮರೆಸಿ ಬೀಗುವರು 
ಯಾರು ಉತ್ತಮರು ಈ ಇಳೆಯೊಳು

"ಯಾರು ಉತ್ತಮರು ಈ ಇಳೆಯೊಳು
ನುಡಿಯುವರು ಮುತ್ತಿನ ಮಾತುಗಳನ್ನ 
  ಮೊಗ್ಗಲಲ್ಲೆ ಇರಿವ ಚೂರಿಯನಿರಿಸಿ 
ಯಾರು ಉತ್ತಮರು ಈ ಇಳೆಯೊಳು"

" ಯಾರು ಉತ್ತಮರು ಈ ಇಳೆಯೊಳು
ಅಮೃತವೇ ಸುರಿಸುವರು ಮಾತುಗಳಲಿ  
ಹೂವಿನ ಮೊಗಹೊತ್ತ ವಿಷಸರ್ಪಗಳು 
ಯಾರು ಉತ್ತಮರು ಈ ಇಳೆಯೊಳು

"ಯಾರು ಉತ್ತಮರು ಈ ಇಳೆಯೊಳು
ಪರರ  ಗುಡಿಸಲಿಗೆ ಬೆಂಕಿಯನಿಟ್ಟು 
ತನ್ನಮನೆಯ ದೀಪ ಉರಿಸುವರು 
ಯಾರು ಉತ್ತಮರು ಈ ಇಳೆಯೊಳು"

"ಯಾರು ಉತ್ತಮರು ಈ ಇಳೆಯೊಳು
ಅನ್ಯರ ಬಾಳಿನಲಿ ಆಟವನಾಡುವರು 
ಅದರಲೇ ಜೀವವ ಸವೆಸುವರು 
ಯಾರು ಉತ್ತಮರು ಈ ಇಳೆಯೊಳು

"ಯಾರು ಉತ್ತಮರು ಈ ಇಳೆಯೊಳು
ಬಂಧುವೆಂಬ ಬಣ್ಣವ ಕಟ್ಟುವರು 
ಉಂಡ ಎಲೆಗೆ ಮೂತ್ರವನೆರೆವರು 
ಯಾರು ಉತ್ತಮರು ಈ ಇಳೆಯೊಳು"

"ಯಾರು ಉತ್ತಮರು ಈ ಇಳೆಯೊಳು
ನೊಂದ ಮಾನವ ನೋಡಿ ನಗುವರು 
ನೋಯಿಸಲೆಂದೇ ಅಪಹಾಸ್ಯವ ಎಣೆವರು 
ಯಾರು ಉತ್ತಮರು ಈ ಇಳೆಯೊಳು

ಯಾರು ಉತ್ತಮರು ಈ ಇಳೆಯೊಳು
ಉಡುಕುತ್ತಿದೆ ಒಂದು ಜೀವ 
ತನ್ನ ನೋವ ಅರಿವ ಮನವ 
ಯಾರು ಉತ್ತಮರು ಈ ಇಳೆಯೊಳು




ಶ್ರೀನಿವಾಸ್ 



Thursday, July 9, 2015

ಬದುಕು-ಬವಣೆ

"ಒಡಲಲ್ಲಿ ಬೆಂಕಿಯ ಉದಗಿಸಿ 
ನಗುಮೊಗವ ತೋರುವುದು 
ಹೃದಯದಲಿ ನೋವಿಟ್ಟು 
ಶಾಂತ ಚಿತ್ತದಿ ಬದುಕುವುದು 
ಅದು ವಿಶಾಲ ಹೃದಯ ಮಾತ್ರ"

"ಇತರರೊಂದಿಗೆ ಬೆರೆತು 
ಉಂಡ ನೋವೆಲ್ಲವ ಮರೆತು 
ಬರಿ ಸುಖವನ್ನೇ ಹಂಚುತ 
ದುಃಖದುಮ್ಮಾನದಿ ಬದುಕ ನೂಕುತ  
ಸಾಗುವುದು ಕಟಿನ ಮನಸ್ಸು ಮಾತ್ರ"

"ಹೀಗೆ ಹುಟ್ಟಿದ್ದೆ  ಶಾಪವೇನೋ 
ಈ ಬದುಕೇ ಶಾಸ್ವತವೇನೋ 
ಮಾಡಿದ ತಪ್ಪುಗಳೇನು 
ಹಿಟ್ಟ ತಪ್ಪು ಹೆಜ್ಜೆಗಳೇನು 
ಮರುಗುವುದು ಮುಗ್ದಜೀವ ಮಾತ್ರ"

"ಕಿತ್ತು ತಿನ್ನುವ ನಾಯಿ-ನರಿಗಳಿಗೂ 
ಹಂಚಿತಿನ್ನುವ ಕಗ-ಮಿಗಗಳಿಗೂ 
ಇರುವ ಒಳ್ಳೆಯ ಮನಸ್ಸು 
ಇಲ್ಲವಾಗಿದೆ ಈ ಮನುಕುಲಕೆ 
ಮುಕ್ತಿಯು ಜೀವಕೆ ಹರಣದಲಿ ಮಾತ್ರ"


ಶ್ರೀನಿವಾಸ್ 


Monday, July 6, 2015

ಹುಣ್ಣಿಮೆ

"ತುಂಬು ಚಂದ್ರನ ಮೊಗವೆ  
ತುಂಬು ಹುಣ್ಣಿಮೆಯ ಚೆಲುವೆ 
ಚೆಂದಕ್ಕೆ ಮತ್ತೊಂದೆಸರೆ ನೀನು 
ಚಂದ್ರನಿಗೆ ಸರಿಸಾಟಿಯು ನೀನು"

"ನಗುಮೊಗದ ನಿನ ಹಂದವೇ ಚೆಂದ 
ಜೇಂಕರಿಸುವ ನಿನ ನುಡಿಗಳು ಸ್ವಚ್ಛಂದ 
ನೋಡುತಿರೆ ನಿನ್ನೆ ನೋಡುವ ಆಸೆ 
ಜೀವವಿಡಿ ನಿನ್ನ ಜೊತೆಗಿರುವಾಸೆ"

"ಅನುಕ್ಷಣವು ಕಾಡುವ ನಿನ್ನಯ ನೆನಪು 
ನನಗೆಂದೆ ನೀನಿಟ್ಟ ಪ್ರೀತಿಯ ಮುಡಿಪು 
ಕಂಡೊಡನೆ ನನ್ನಲಿ ಹರ್ಷೋದ್ಗಾರ 
ಮಾಡದಿರು ನೀ ಹಿಂಸೆಯ ಪ್ರಹಾರ" 



ಶ್ರೀನಿವಾಸ್  



Friday, July 3, 2015

ಇಳೆ

"ನೀ ನನ್ನೋಡನಿರೆ 
ಆಕಾಶವೇ ಕೈಗೆ 
ಎಟುಕಿದಂತೆ"

"ಅನುಕ್ಷಣವು ನೀ 
ನನ್ನೊಡನೆ ಇರೆ  
ತಂಗಾಳಿಯಂತೆ"

"ದೂರಮಾಡದಿರು 
ನನ್ನ ಎಂದೆಂದಿಗೂ 
ತಬ್ಬಲಿಯಾಗದಂತೆ"


ಶ್ರೀನಿವಾಸ್ 


Friday, June 12, 2015

ನಿವ್ವೇದನೆ

"ನಾ ಕಾಣುವ ವಸ್ತುವಲ್ಲೂ ನೀ ಕಾಣುವೆ ಏಕೆ 
ನನ್ನ ತನು, ಮನದಲಿ ನೀ ಅವಿತಿರುವೆ ಅದಕೆ 
ನಾ ಗುನುಗುವ ಗಾನದಲಿ ನಿನ ಹೆಸರೇ ಏಕೆ 
ನನ್ನ ಉಸಿರಲಿ ನೀ ನಿನ ಉಸಿರಿದೆ ಅದಕೆ"

"ಡಾವಿಂಚಿಯು ಚಿತ್ರಿಸಿದ ಚೆಲುವು ನಿನಲ್ಲ 
ಕ್ಲಿಯೋಪಾತ್ರಳಂತ ಸೊಬಗು ನಿನದಲ್ಲ 
ಪ್ರಕೃತಿಯೇ ಲೀನವಾಗಿದೆ ನಿನಲೆಲ್ಲ 
ಆಗಬಯಸಿದೆ ನನ್ನಿಮನಸ್ಸು ನಿನ್ನಯ ನಲ್ಲ"

"ನನ್ನಿಂದ ನೀ ದೂರ ಸರಿದಿರುವೆ 
ನಿನಗರಿಯದಂತೆ ನಿನ್ನೊಳಗೆ ನಾನಿರುವೆ 
ನಿನ್ನೊಲವಿಗೆ ನಾ ಅನುಕ್ಷಣವು ಕಾದಿರುವೆ 
ನಲ್ಲೆ ಬಾ ಬಲುಬೇಗನೆ ನೀ ಎಲ್ಲಿರುವೆ" 


ಶ್ರೀನಿವಾಸ್ 

Monday, June 8, 2015

ಬೆಳ್ಳಿ

"ಬೆಳ್ಳಿ ಚುಕ್ಕಿ ಮೂಡುವ ಹೊತ್ತಿನಲಿ 
ನಾ ಕಂಡ ಸುಮಧುರ ಸ್ವಪ್ನದಲಿ 
ನೀನತ್ತ ನದಿಯ ತಟದಲಿ 
ನಾನಿತ್ತ ನದಿಯ ದಡದಲಿ  
ನಿಂತಂತ ಮೋಹಕ  ದೃಶ್ಯವ ಕಂಡೆ "

"ಚುಕ್ಕಿಗಳ ಕಾಂತಿಯೇ 
ನಿನ್ ಕಂಗಳ ಹೊಳಪಿಗೆ ನಾಚಿರಲು 
ಅರಳಿದ ಕಮಲವೆಮ್ಬಂತೆ 
ನಿನ್ನ ಕೆನ್ನೆಗಳಲಿ ಕಾಂತಿಯೊಮ್ಮಿರಲು 
ಮೂಖವಿಸ್ಮಿತನಾಗಿ ನಾ ನಿಂದೆ"

"ನಿನ್ ಕಣ್ಸನ್ನೆಯ ಅಣತಿಯಂತೆ 
ನಾ ನಿನ್ನತ್ತ ಸಾಗಿ ಬಳಿನಿಂದು 
ಬಾಹುಬಂಧನದೊಳು ನಿನ್ನಿರಿಸಿ 
ಕೆನ್ನೆಗೊಂದು ಚುಂಬಿಸಲೆನ್ನುವಷ್ಟರಲ್ಲಿ 
ಬೆಳ್ಳಂ ಬೆಳಕಾಗಿಹೋಯಿತು" 


ಶ್ರೀನಿವಾಸ್ 



Wednesday, June 3, 2015

ಭಿನ್ನ-ವಿಭಿನ್ನ ಮನಸ್ಸು

"ಮನಸ್ಸಿಗೆ ಒಮ್ಮೆ 
ಸರಿಯಿಲ್ಲವೆಂಬ ವಿಚಾರವು 
ಒಮ್ಮೊಮ್ಮೆ ಸರಿಯೆನಿಸಲೂಬಹುದು 
ಸಹಜ! ಅದಕಾಗಿಯೇ ಅದು ಮನಸ್ಸು" 

"ಮನಸ್ಸು ನುಡಿದಂತೆ 
ಒಬ್ಬೊಬ್ಬರನ್ನು ಒಂದೊಂದು 
ವಿಶೇಷ ಸ್ಥಾನದಲ್ಲಿಟ್ಟು ಕಾಡುವ 
ನೋವಿನ ಪರಿ! ಅದಕ್ಕೆ ಅದು ಜೀವನ"

"ಜೀವನ-ಮನಸ್ಸಿನ ಯಾತ್ರೆಯು  
ಖಚಿತ, ನೋವು-ನಲಿವಿನ ಬುತ್ತಿ 
ಸಂಬಾಳಿಸುವುದು ಬಲುಕಷ್ಟ 
ಭಿನ್ನ-ವಿಭಿನ್ನ ಮನಸ್ಸುಗಳನ್ನು"


ಶ್ರೀನಿವಾಸ್ 




Monday, May 11, 2015

ನೆನಪಿನಂಗಳ

"ಸಾಗಿಬಂದ ದಾರಿಯಲಿ 
ಸರಿದು ಹೋಗುವ ತಾಣಗಳೆಷ್ಟೋ 
ಒಂದೊಂದು ತಮ್ಮದೇ ಆದ 
ಸಿಹಿ, ಕಹಿ ಅನುಭವದ ಬುತ್ತಿಯಂತೆ "

"ಮತ್ತೆ ಮತ್ತೆ ಕಣ್ಮುಂದೆ 
ಮಿಂಚಿ ಮರೆಯಾಗುವ 
ಸಿಹಿ ನೆನಪುಗಳು ಎಂದೂ 
ಬೆಂಬಿಡದೆ ಕಾಡುವ ಮೃಗದಂತೆ"

"ನೋವು, ನಲಿವಿನ ಸಾರವಿದು 
ನಾವು ಸಾಗಿಬಂದ ಜೀವನ 
ಅನಾನುಭವ ಪುಟಗಳ 
ಅರಿದಾಕಲಾಗದ  ಪುಸ್ತಕದಂತೆ"  


ಶ್ರೀನಿವಾಸ್ 

Wednesday, April 29, 2015

ಪ್ರಳಯ

"ವಸುಧೆಯ ಅಸಮಾಧಾನ 
ವ್ಯಕ್ತವಾಗುವ ಪರಿಯೇ 
ಭೂಕಂಪನ, ಪ್ರವಾಹ 
ಲಾವಾರಸದ ಕಾರಂಜಿ" 

"ಮನುಜ ಕುಲದ  
ಅಹಂಮ್ಮಿನ ಅತಿರೇಕಕ್ಕೆ 
ಪ್ರಕೃತಿಮಾತೆಯ ಪ್ರತ್ಯುತ್ತರ 
ಪ್ರಳಯದ  ರೋದ್ರಾವಾತಾರ"

"ಅರಿಯಬೇಕಿದೆ ನಾವು  
ಪ್ರಕೃತಿಯ ಭಾವೊದ್ವೇಗವನು 
ನಾವು ಇಡುವ ಹೆಜ್ಜೆಯನು 
ಅರಿವಿನಿಂದಿಡಬೇಕು ಅನುಕ್ಷಣವು"



ಶ್ರೀನಿವಾಸ್ 



Thursday, April 9, 2015

ಬಿಂಬ

"ಚುಕ್ಕಿಯನಿಟ್ಟು ಬಿಡಿಸಿದ ನಿನದೆ ಕಂಗಳಲಿ 
ಕಾಣುತಿಹುದು ನನ್ನದೇ ಪ್ರತಿಬಿಂಬ 
ಮೂಡಿಬಂದಿಹ ಚೆಲುವ ಮೈಮಾಟವ 
ದಾವಾಂತದಲಿ ತುಂಬಿಕೊಂಡಿಹೆ ಕಣ್ಣತುಂಬ"

"ಕಣ್ ಮುಚ್ಚಿ ಕಾದಿಹೆನು ನಿನ ಬಿಂಬವ  
ಜಾರಿಹೋಗುವೆ ಕಣ್ತೆರೆದರೆ ನೀನೆಂದು 
ಸುಳಿಯದು  ಕಾಡಿರುಳು ನಿನ ರೂಪವ 
ಕಳೆದುಕೊಳ್ಳಲಾರೆ ನಿನ್ನ ನಾನೆಂದು"

"ಜಾರಿಹೋಗುವೆಯಾದರೆ  ನನದೊಂದು ಬಿನ್ನಹ 
ಬತ್ತಿಹೋದ ಕಂಗಳಿಂದ ಬಾರದಾಗಿದೆ ಬಿಂಬ 
ಅಪರಿಪೂರ್ಣ ಈ ಜೀವನವು ನೀನಿರದ ವಿನಃ 
ತುಂಬಿಹೋಗಿದೆ ಈ ಹೃದಯದಲಿ ನಿನದೆ ಬಿಂಬ"


ಶ್ರೀನಿವಾಸ್ 


Monday, March 30, 2015

ಅರಿವು

"ಮನದಾಂತರಾಳದ ಮಾತೆಲ್ಲವ 
ಮೊಗೆಮೊಗೆದು ಸುರಿದಿರುವೆ 
ಹೃದಯದ ಬಾವಿಯು ಬತ್ತಿಹೋಗಲು 
ಇನ್ನೆನನು ನೀ ನಿರೀಕ್ಷಿಸಿರುವೆ?"

"ನಾ ಸುರಿದ ಮಾತೆಲ್ಲವು 
ಫಲಿತಾಂಶವನಂತು  ಕಂಡಿಲ್ಲ 
ಕಂಡುಕೊಳ್ಳಬೇಕಿದೆ ನನಗೆ ನಾನೇ 
ನಿರೀಕ್ಷೆಗೂ ಮೀರಿದ ಉತ್ತರ"

"ನಾನು ತಪ್ಪಿದ ದಾರಿಯನು  
ಮತ್ತೆ ಹುಡುಕಬೇಕಿದೆ ಕತ್ತಲಲಿ 
ನನ್ನೊಳಗಿನ ಅರಿವೇ ಇಂದು 
ನನ್ನ ಬಾಳಿನ ದೀವಿಗೆಯಾಗಬೇಕಿದೆ"


ಶ್ರೀನಿವಾಸ್ 




Friday, March 13, 2015

ಬಾಲ್ಯ

"ಇಂದೇಕೋ ಎನ್ನ ಮನಸ್ಸು 
ನನ್ನ ಬಾಲ್ಯವ ಹುಡುಕುತಿದೆ 
ನಾ ಅಲೆದ ದಾರಿಯಲಿ 
ನಾ ಕುಣಿದ ಬೀದಿಯಲಿ"

"ಎಂದೆಂದಿಗೂ ಹಚ್ಚ ಹಸಿರು 
ಬಾಲ್ಯದ ಆ ನೆನಪುಗಳು 
ಮರೆಯಲೆಂದರು ಆಗದ 
ಹಾಸ್ಯದ ಕುರುಹುಗಳು"

"ಒಂದೇ ಉಸಿರಲಿ 
ಏರಿದ ಗಿರಿಕಂದರಗಳು 
ನನ್ನ ನಲಿವೆಗೆ ಸ್ಪಂದಿಸಿದ 
ಮರಗಿಡಗಳು ನನ್ನ ಕಾಡಿವೆ"

"ಮುಪ್ಪು ಕಾದು ಕುಳಿತಿದೆ 
ಎಂದಿವನ ಆವರಿಸಲೆಂದು  
ಎನ್ನ ಮನಸ್ಸು ಹೊರಳಾಡಿದೆ 
ಕಳೆದ ಆ ದಿನಗಳು ಬಾರವೆಂದು"


ಶ್ರೀನಿವಾಸ್ 





Wednesday, March 4, 2015

ಹೋಳಿಕ

"ಹೋಳಿ ಭಾವನೆಗಳ ಸಂಕೇತ 
ಅಹುದು ಆ ಹೋಳಿಯಲ್ಲಿ 
ನನ್ನಜ್ಜಿ ಹೋಳಿಕಾಳ ಶೋಕವಿದೆ 
ವಿಕೃತಪಿಪಸುಗಳ ಮೋಹಕ್ಕೆ 
ಬಲಿಯಾದ ಗೋಳು ಇದೆ"

"ಸದ್ಗುಣಗಳ ಮೈವೆತ್ತ 
ಸಕಲ ಸಂಪನ್ನಳು 
ದುಶ್ಚಟಗಳ ಧಿಕ್ಕರಿಸಿ 
ಸದ್ಗುಣಗಳ ಸನ್ಮಾನಿಸಿ 
ಸದಾಚಾರಗಳ ಭೋಧಿಸಿದ 
ಸದ್ಗುರು ಅವಳು "

"ಸುರಪಾನವ ತ್ಯಜಿಸೆಂದು 
ಬೋಧಿಸ ಹೋರಾಟ ನನ್ನಜ್ಜಿಗೆ 
ಸುರಾಸುರ ಕಾಣಿಕೆ ನನ್ನಜ್ಜಿಯ 
ಶೀಲ, ಪ್ರಾಣ ಹರಣ 
ನಿವಾಡುವ ಹೋಳಿಯಲಿ 
ನನ್ನಜ್ಜಿ ಹೋಳಿಕಾಳ ಅಸ್ಥಿ ಇದೆ "


ಶ್ರೀನಿವಾಸ್ 

Tuesday, March 3, 2015

ಪ್ರೀತಿಯ ಮಡಿಲು

"ವಸುಧೆಗೆ ವರ್ಷಧಾರೆಯ ತಂಪು 
ಪ್ರೇಮಿಗೆ ಪ್ರಿಯತಮೆಯ ಕಂಪು 
ಏನಿದೆಯೋ ಪ್ರೀತಿಯ ಒಡಲಲಿ 
ಬದುಕಿಹೆ ನಿನ್ನಯ ಮಡಿಲಲಿ"

"ಪ್ರೀತಿಯ  ರೂಪವೇ ಪ್ರೇಯಸಿ 
ಸಲಹು ಪ್ರೀತಿಯ ಪ್ರೀತಿಸಿ 
ಗೊಂದಲಗಳು ಇರಬಹುದು ಲೋಕದಲಿ 
ಬರಬಹುದು ಕದುಕಷ್ಟಗಳು ಬದುಕಿನಲಿ"

"ಸಾಗಿದೆ ಜೀವನವು ಏರಿಳಿತದಲಿ 
ಶೋಧನೆ, ಸಾಧನೆಯ ಗುಂಗಿನಲಿ 
ಕೊನೆಗೆ ತಿಳಿವುದು ಪ್ರತಿಯೊಬ್ಬರಿಗೂ? 
ಹಂಚಬೇಕು ಪ್ರೀತಿಯ ಎಲ್ಲರಿಗೂ!" 


ಶ್ರೀನಿವಾಸ್ 


Friday, February 27, 2015

ಸುಳಿವು

"ಚುಕ್ಕಿ ಚಂದ್ರಮನ ಕಂಡಾಗಲೆಲ್ಲ 
ಕುಣಿದಾಡುವುದು ಮನಸ್ಸು ಒಳಗೊಳಗೆ 
ನೀನೆ ತುಂಬಿರುವೆ ಚಂದ್ರಮನಲ್ಲೆಲ್ಲ  
ಸುಳಿದಾಡಬೇಕು ನಾನೆಂದು  ಒಳಹೊರಗೆ"

"ನಿನ ನಗುವಲ್ಲಿ ಕಾಣುವುದು 
ಕೋಲ್ಮಿಂಚಿನ ಹೊಳಪು 
ಕಣ್ಣು ಉಬ್ಬಿನಲಿ ಕಾಣುವುದು 
ಕಾಮನಬಿಲ್ಲಿನ ಹೊಳಪು"

"ಕಾರಂಜಿಯು ಚಿಮ್ಮಿದಂತೆ 
ನಿನ್ನ ಕಂಗಳ ನೋಟವು 
ಮಾಯಾಜಿಂಕೆ ಸುಳಿದಂತೆ 
ನೀನು ಸುಳಿವ ಕಾಲವು"


ಶ್ರೀನಿವಾಸ್ 

Thursday, February 19, 2015

ಪ್ರೀತಿಯನ್ನರಸಿ

"ಸಿಕ್ಕ ಪ್ರೀತಿಯ ತೊರೆದು 
ಸಿಗದ ಪ್ರೀತಿಯ ಹಿಂದೆ ಅಲೆವ 
ಮಾನವ ಇದೆಂತ ಗೋಳು"

"ನಿನ್ನ ಸುತ್ತಲು ಇರಬಹುದು 
ನಿನ್ನ ಪ್ರೀತಿಸುವ, ಆರಾಧಿಸುವ 
ಮನಗಳ ಹರಿತು ನೀ ಬಾಳು"

"ತುಂಬು ಚಂದಿರನು ತುಂಬಿದ 
ಮನದಲಿ  ತುಂಬಲಿ ಪ್ರೀತಿಯು 
ತಾಳ್ಮೆಯಿಂದಲೇ ಸಾಗಲಿ ಜೀವ"

"ಸಹೃದಯಗಳ ಜೊತೆಗೂಡಿ 
ಸ್ನೇಹದ ತುದಿಯನು ನೀ ದಾಟು 
ಸಿಗದ ಪ್ರೀತಿಗೆ ಮರುಗದಿರಲಿ ಜೀವ"



ಶ್ರೀನಿವಾಸ್ 

Thursday, February 5, 2015

ತುಂಬು ಚಂದಿರ

"ನೆನೆ ನೆನೆದು ನೆನೆದೆನು  
ನಿನ್ನ ನೆನಪ ಇಬ್ಬನಿಯಲಿ 
ನಗು ನಗುತ ಸಾಗಿರುವೆ
ನಿನ್ನ ನಗುವ ಕಡಲಿನಲಿ" 

"ತುಂಬು ಚಂದ್ರನು ಮೂಡುವನು 
ನಿನ್ನ ಚೆಲುವ ಮೊಗದಲಿ 
ನನ್ನ ನೋಡುತ ನಗುವನು 
ಏನೋ ಕಂಡಂತೆ ಸ್ನೇಹದಲಿ" 

"ಬೆಳ್ಳಿ ಚುಕ್ಕಿಗಳು ಮೂಡಿರಲಿ 
ನಿನ್ನ ಜೀವನದ ಬಾಂದಳದಿ 
ನೀನು ನಗುತಲಿ ಬಾಳಿರಲು 
ನನ್ನ ಕಾಡದೆಂದು ಕಾಡಿರುಳು"


ಶ್ರೀನಿವಾಸ್ 


Monday, January 19, 2015

ಡಾ. ವಿ.ಕೆ.ಅರ್.ವಿ. ರಾವ್

ದುಡಿದು ಧಣಿದ ಆಲದ ಮರವೆ 
ಧಣಿದು ದುಡಿದ ಆಲದ ಮರವೆ 
ಮುಗಿಲು ಮುಟ್ಟಿದೆ ನಿನ್ನಯ ಅರಿವೆ 
ಆವರಿಸಿಹೆ ನೀ ನಮ್ಮಯ ಮನವೆ 

ಸಾಟಿ ಯಾವುದು ನಿನ್ನಯ ತ್ಯಾಗಕೆ 
ಶರಣಾಗಿಹೆವು ನಿನ್ನಯ ತನಕೆ 
ಬಂದೊಮ್ಮೆ ಆವರಿಸು ನಮ್ಮಯ ಮನಕೆ 
ಶುಭಕೋರುವೆವು ಇಂದು ನಿಮ್ಮ ತನುಮನಕೆ 

ನೆರಳಾಗಿಹೆ ನೀ ನೂರಾರು ಜೀವಗಳಿಗೆ 
ನೆನೆಯಬೇಕು ನೀ ಪಣತೊಟ್ಟ ಘಳಿಗೆ 
ಮನದುಂಬಿ ಹರಿದಿದೆ ನಮ್ಮಯ ಒಳ ಹೊರಗೆ 
ಹರಸ್ಸಿಂದು ತುಂಬು ಹೃದಯದಿ ನಮಗೆ 


ಶ್ರೀನಿವಾಸ್ 


Thursday, January 1, 2015

ಹರುಷದ ಹೊನಲು

"ಸವಿಯಬೇಕಿದೆ ಹೊಸ ವರುಷದ ಈ ಕ್ಷಣವ 
ಎಣಿಸಬೇಕಿದೆ ಕಣ್ಣ  ಮರೆಯಾದ ಆ ದಿನವ 
ಕ್ಷಣದ ಸವಿಯು ದಿನದ ಖನಿಯು ನೀ 
ನನ್ನಯ ನಗುವ ಕಾರಣ ಎಂದೆಂದು ನೀ"

"ಕಳೆದ ದಿನಗಳು ನೀಡಿವೆ ಭರವಸೆಯ 
ಬರುವ  ಕ್ಷಣಗಳು ಹೇಳಿವೆ ಶುಭಾಷಯ 
ಬರಲಿ  ಒಲವಿನ ವಸಂತಕಾಲ 
ಹೋಗಲಿ  ಕವಿದಿಹ ಮಾಗಿಯಕಾಲ"

"ಕಾದು ಕುಳಿತ ಸಮಯಕೆ ದೊರೆವುದೆ ಮಾನ್ಯತೆ 
 ನೀನು ಕೊಡುವ ಉತ್ತರಕೆ ನಾನಗಿಹೆ  ಧನ್ಯತೆ 
ಇರುವೆಯಾ ಎನ್ನ ಬಾಳಿನಲಿ ನೀ ಅನುಕ್ಷಣವು 
ನಲಿವುದು ನನ್ನ ಜೀವವು ಆ ಪ್ರತಿದಿನವು" 



ಶ್ರೀನಿವಾಸ್